10
Jul
08

ಕ್ಷಮೆಗಳ ಭಾರ

ಕ್ಷಮೆಗಳ ಭಾರ

 

ಮಾತಾಡದೆ ಹಲವು ವರ್ಷಗಳೇ ಕಳೆದವು
ಮಾತು ಎಲ್ಲಿ ಮನೆ ಮುರಿಯುವುದೋ ಎಂದು
ಅಳುಕಿ ಸುಮ್ಮನಿದ್ದೆ.
ಈ ಮಳೆಗಾಲ ಧೋ ಎಂದು ಮಳೆಸುರಿದು
ಇದ್ದಕಿದ್ದಂತೆ ಬೆಂಗಳೂರಿನ ಮೋಡ ಕರಗಿ
ನವೆಂಬರಿನಲ್ಲೇ ಚಳಿ ಮೊಳೆ ಕೊರೆದಾಗ 
ಒಂದು ಸಂಜೆ
ಹೆಪ್ಪುಗಟ್ಟುತ್ತಿದ್ದ ರಕ್ತ ಮಾತಾಡಿತು.
ಪ್ರೀತಿಯ ಮೊದಲ ಪಟ್ಟು ಕಲಿಸಿದ ಗುರು ಅವಳು
ಶಬ್ದದ ಲಜ್ಜೆಯುಕ್ಕಿಸಬಲ್ಲ ಹುಡುಗಿ
ಈಗ
ಮೋಹದ ಮಾಯೆಯನ್ನೂ ಮೀರಿದಳೆ?
ನನ್ನ ಕ್ಷಮೆಗಳ ಭಾರ ಹೆಚ್ಚುತ್ತಿದೆ.
- ಕಿರಣ್

21
May
08

ಹಿರಿಯ ಮಿತ್ರ ಪ್ರಶಾಂತ್ ರನ್ನು ಕುರಿತು

ನಮ್ಮ ತಲೆಮಾರಿನ ಯುವಕರಲ್ಲಿ ಸಾಮಾಜಿಕ ಬದ್ದತೆಯನ್ನು ಕಾರ್ಯಗತ ಮಾಡಲು ಹೆಣಗುತ್ತಿರುವ ಕೆಲವೇ ಕೆಲವರಲ್ಲಿ ಪ್ರಶಾಂತ್ ಕೂಡ ಒಬ್ಬರು. ನಾನು ಪ್ರಶಾಂತ್ರನ್ನು ಮೊದಲ ಬಾರಿಗೆ ನೋಡಿದ್ದು 1998 ರಲ್ಲಿ ಕುವೆಂಪು ಯುನಿವರ್ಸಿಟಿಯ ಆವರಣದಲ್ಲಿ. ಅಲ್ಲಿಗೆ ತಮ್ಮ ಎಂಫಿಲ್ ಪದವಿಗಾಗಿ ಅಲೆಯುತ್ತಿದ್ದ ಪ್ರಶಾಂತ್ ಪರಿಚಯವಾದಾಗ ಕರ್ನಾಟಕದ ಜನಸಮುದಾಯಗಳ ಬಗ್ಗೆ ಸಮಗ್ರವಾದ ಚಿತ್ರಣವನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು. ಕರ್ನಾಟಕದಲ್ಲಿರುವ ಎಲ್ಲ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ರೀತಿ ನೀತಿಗಳ ಬಗ್ಗೆ ಅವರು ನಡೆಸುತ್ತಿದ್ದ ಸಂಶೋದನೆ ಹಾಗು ಕಲೆ ಹಾಕುತ್ತಿದ್ದ ವಿವರಗಳನ್ನು ನೋಡಿ ನನಗೆ ಆ ಅಧ್ಯಯನದಲ್ಲಿ ಅವರ ಜೊತೆಗೆ ಒಂದಿಷ್ಟು ಕೆಲಸ ಮಾಡಬೇಕೆನ್ನಿಸಿ ಕೈ ಜೋಡಿಸಿದ್ದೆ. ಅಲ್ಲಿಂದ ಶುರುವಾದ ಸ್ನೇಹ ಇಂದಿನವರೆಗೂ ಬೆಳೆದು ಬಂದಿದೆ.

 

ಗುಂಪಿನಲ್ಲಿ ಯಾರಾದರೂ ಇಂಗ್ಲಿಷ್ನಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದರೆ, ನನಗೆ ಅವರ ಹಾಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲವೇ ಎಂದು ಒಳಗೊಳಗೇ ಕೊರಗುವ ಪ್ರಶಾಂತ್, ಕನ್ನಡದಲ್ಲಿ ವಾಚಾಳಿ ಎನ್ನುವಷ್ಟರ ಮಟ್ಟಿಗೆ ಮಾತನಾಡತೊಡಗುತ್ತಾರೆ. ಮೊದಲ ಭೇಟಿಯಲ್ಲಿ ಒಂಚೂರು ಕಿಲಾಡಿಯೆನ್ನಿಸುವ ಪ್ರಶಾಂತ್ರ ಸೀರಿಯಸ್ ಮುಖ ಕಾಣಲು ಒಂದಿಷ್ಟು ಸಮಯ ಬೇಕಾಗುತ್ತದೆ. ಕರ್ನಾಟಕದ ಜಾತಿ ಪದ್ದತಿ, ಲಂಬಾಣಿ ಜನಾಂಗ, ನಮ್ಮಲ್ಲಿನ ವೃದ್ಧರ ಪರಿಕಲ್ಪನೆಗಳ ಬಗ್ಗೆ ಮೊದಮೊದಲು ಕೆಲಸ ಮಾಡತೊಡಗಿದ ಪ್ರಶಾಂತ್, ಹಂಪಿ ಕನ್ನಡ ವಿಶ್ವವಿದ್ಯಾಯಲವನ್ನು ಸೇರಿದ ಬಳಿಕ ಹೆಚ್ಚು ಕೆಲಸ ಮಾಡಿದ್ದು ಕರ್ನಾಟಕದ ಶಾಲಾ ಶಿಕ್ಷಣದ ಬಗ್ಗೆ.

ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರು ಹೆಚ್ಚಾಗಿ ಮಾತನಾಡಿದ್ದು ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಎಸ್ಡಿಎಂಸಿ (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ಕಾರ್ಯಕ್ರಮದ ಬಗ್ಗೆ. ಶಿಕ್ಷಣದ ವಿಕೇಂದ್ರೀಕರಣ ಈ ಕಾರ್ಯಕ್ರಮದ ಮುಖ್ಯ ಆಶಯ. ಆದರೆ ಮೊದಲಿದ್ದ ವ್ಯವಸ್ಥೆಗೆ ಹೊಂದಿಕೊಂಡಿದ್ದ ಶಿಕ್ಷಕರು ಹಾಗೂ ಬಿಇಓಗಳು ಇದೊಂದು ಮತಿ ಇಲ್ಲದ ವ್ಯವಸ್ಥೆ ಎಂದು ಹೀಗಳೆಯುತ್ತಿದ್ದಾಗ ಮತ್ತು ಇಂಥದೊಂದು ವ್ಯವಸ್ಥೆ ಬೇಡ ಎನ್ನುತ್ತಿರುವಾಗ ಅದರ ಬಗ್ಗೆ ಅಧ್ಯಯನ ನಡೆಸಲು ಹುಟ್ಟಿಕೊಂಡಿದ್ದು ಈ ಎಸ್ಡಿಎಂಸಿ. ಅಷ್ಟು ಹೊತ್ತಿಗಾಗಲೇ ಹೈದರಾಬಾದ್ ಕರ್ನಾಟಕದಲ್ಲಿನ ಶಾಲೆಗಳಲ್ಲಿ ಬಿಸಿಯೂಟ ಹಾಗೂ ದಲಿತರ ಶಿಕ್ಷಣದ ಬಗ್ಗೆ ಒಂದಿಷ್ಟು ತಲೆಕೆಡಿಸಿಕೊಂಡು ಕೂತಿದ್ದ ಪ್ರಶಾಂತ್ರಿಗೆ ಒಂದು ವೇದಿಕೆ ಸಿಕ್ಕಿದಂತಾಯಿತು. ಅಲ್ಲಿಯವರೆಗೂ ಮಾಡಿದ ಕೆಲಸವೆಲ್ಲ ‘ಅಧ್ಯಯನ’ ಅಂತ ಮಾತ್ರವೇ ಅನಿಸುತ್ತಿದ್ದುದು ಈಗ ಅಧ್ಯಯನದ ಜೊತೆಗೆ ನೇರವಾಗಿ ಕ್ಷೇತ್ರದಲ್ಲಿ ಕೆಲಸ ವಿಸ್ತರಣೆ ಮಾಡಲು ಅವಕಾಶ ಸಿಕ್ಕಿದ್ದು ಪ್ರಶಾಂತ್ಗೆ ಸಿಕ್ಕ ವರವೇ ಸರಿ. ಶಾಲಾಶಿಕ್ಷಣದಲ್ಲಿ ತೀರಾ ಹಿಂದುಳಿದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಎಸ್ಡಿಎಂಸಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು, ಶಾಲೆಗಳ ಅಭಿವೃದ್ಧಿಗಾಗಿ ನೇಮಿಸಿರುವ ‘ಶಾಲಾಭಿವೃದ್ಧಿ ಸಮಿತಿ’ಯಲ್ಲಿನ ಸದಸ್ಯರು ಹಾಗೂ ಶಿಕ್ಷಕರ ನಡುವೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಕೈಹಾಕಿದರು. ವಿಶೇಷವೆಂದರೆ ರಾಯಚೂರು ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ‘ಶಾಲಾಭಿವೃದ್ಧಿ ಸಮಿತಿಗಳ ಸಮಾವೇಶ’ವನ್ನು ಯಾರ ಅನುದಾನವೂ ಇಲ್ಲದಂತೆ ನಡೆಸಿದ್ದು. ಈ ಸಮಾವೇಶಗಳಿಗೆ ಎಲ್ಲಾ ಹಳ್ಳಿಗಳಿಂದ ಜನರು ತಮ್ಮ ಖಚರ್ಿನಲ್ಲೇ ಬಂದು ತಮ್ಮ ತಮ್ಮ ಊರಿನ ಶಾಲೆಗಳ ಗುಣಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವುದನ್ನು ಕುರಿತು ಚರ್ಚಿಸಿ ತಾವೂ ಸಹ ಶಿಕ್ಷಣ ವ್ಯವಸ್ಥೆಯ ಭಾಗ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡಿದ್ದು ಪ್ರಶಾಂತ್ ಮತ್ತು ಅವರ ಜೊತೆ ಕೆಲಸ ಮಾಡಿದ ಆ ಜಿಲ್ಲೆಯ ಕೆಲವು ಶಿಕ್ಷಕರಿಂದ ಎನ್ನುವುದು ಗಮನಿಸಬೇಕಾದದ್ದು. ಈಗ ಕೊಪ್ಪಳ ಜಿಲ್ಲೆಯಲ್ಲೂ ಇಂಥ ಸಮಾವೇಶ ಮಾಡಲು ಹೊರಟಿದ್ದಾರೆ.

ಶಿಕ್ಷಣ ವ್ಯವಸ್ಥೆಯನ್ನು ಆಡಳಿತ ವರ್ಗದವರ ಹಿಡಿತದಿಂದ ತಪ್ಪಿಸಿ ಅದನ್ನು ವಿಕೇಂದ್ರೀಕರಣಗೊಳಿಸಿದರೆ ಈಗಿರುವುದಕ್ಕಿಂತ ಹೆಚ್ಚಿನ ಗುಣಮಟ್ಟ ಆ ಶಾಲೆಗಳಿಗೆ ಬರಲು ಸಾಧ್ಯ ಎನ್ನುವುದು ಪ್ರಶಾಂತ್ಗಿರುವ ನಂಬಿಕೆ. ಪೋಷಕರಿಗೆ ಶಾಲೆಗಳ ಒಡೆತನ ಮನೋಭಾವ ಬಂದರೆ, ಅದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಅವರೇ ಪ್ರಯತ್ನಿಸುತ್ತಾರೆ. ಹಾಗೆ ಒಡೆತನದ ಮನೋಭಾವವನ್ನು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರಲ್ಲಿ ಮೂಡಿಸಲು ಹೊರಟಿರುವುದು ಪ್ರಶಾಂತ್ರ ಲೇಟೆಸ್ಟ್ ಸಾಹಸ ಯಾತ್ರೆ. ಜೊತೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ಆ ಭಾಗದ ಮಕ್ಕಳು ಪಡೆಯಬೇಕು ಎಂದು ಇನ್ನಿಲ್ಲದಂತೆ ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿರುವ ಪ್ರಶಾಂತ್ಗೆ ಶಿಕ್ಷಣ ಎನ್ನುವುದು ಅಲ್ಲಿನ ಜನರ ಆಥರ್ಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳಿಂದ ಹೇಗೆ ಪ್ರಭಾವಿತವಾಗಿರುತ್ತದೆ ಎನ್ನುವುದರ ಅರಿವು ಇರುವುದರಿಂದ ಅವರಿಂದ ಹೆಚ್ಚಿನದನ್ನು ನಾವು ನಿರೀಕ್ಷಿಸಬಹುದು.

ನಾನು ಬಲ್ಲಂತೆ ಪ್ರಶಾಂತ್ Serious Research ವಿದ್ಯಾರ್ಥಿಯಲ್ಲ. ಅಧ್ಯಯನ ತಳಮಟ್ಟದಲ್ಲಿ ಕಾರ್ಯಗತವಾಗುವುದು ಸಾಧ್ಯವಾಗದಾಗ ಖಿನ್ನರಾಗಿ ಕುಳಿತುಬಿಟ್ಟಿದ್ದೂ ಇದೆ. ಪ್ರಶಾಂತ್ಗೆ ಅಧ್ಯಯನ ಅಭಿವೃದ್ಧಿಗೆ ಸಹಾಯವಾಗುವಂತೆ ಸಮಾಜದಲ್ಲಿ ಅಳವಡಿಕೆಯಾಗಬೇಕೆನ್ನುವ ಆಸೆ ಜಾಸ್ತಿ. ಅಧ್ಯಯನಕ್ಕಿಂತ ಅದರ ಕಡೆಗೆ ಹೆಚ್ಚಿನ ಒಲವು ಇರುವಂತೆ ನನ್ನಂತೆ ಹಲವರಿಗೆ ಕಾಣಿಸುವುದು ಅದರಿಂದಲೇ ಇರಬೇಕು. ಅವರಿಗಿರುವ ಸಾಮಾಜಿಕ ಕಾಳಜಿ ಮತ್ತು ಅದಕ್ಕೆ ಹೊಂದಿಕೊಳ್ಳುವಂಥ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಕೆಲವೊಮ್ಮೆ ಹೊಟ್ಟೆಕಿಚ್ಚು ತರಿಸಿದ್ದೂ ಇದೆ. ಈಗೀಗ ಅಮತ್ರ್ಯ ಸೇನ್ರ ‘ಗಜ ಠಜಿ ಗಿಠಛಿಜ’ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾತನಾಡುತ್ತಿರುವ ಪ್ರಶಾಂತ್, ಹೈದರಾಬಾದ್ ಕರ್ನಾಟಕದ ಜನರಲ್ಲಿ ಅಂಥದೊಂದು ಧ್ವನಿಯನ್ನು ಅವರೇ ಎತ್ತುವಂತೆ ಮಾಡಬೇಕೆನ್ನುವ ಹಂಬಲವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ಅಂಥ ಧ್ವನಿಯುಳ್ಳ ಕರ್ನಾಟಕದ ಜಿಲ್ಲೆಗಳಲ್ಲಿ ಒಬ್ಬನೇ ರಾಜಕಾರಣಿ ಮತ್ತೆ ಮತ್ತೆ ಆರಿಸಿ ಬಂದಿಲ್ಲ. ಜೊತೆಗೆ ಆರಿಸಿ ಬಂದವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲೇ ಬೇಕಾಗಿಬರುತ್ತದೆ. ಆದರೆ ಉತ್ತರ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಒಬ್ಬನೇ ರಾಜಕಾರಣಿ ಮೂರು ದಶಕಗಳಿಂದಲೂ ಆಯ್ಕೆಯಾಗುತ್ತಿದ್ದರೂ ಅಭಿವೃದ್ಧಿಕಾಣದೇ ಕುಳಿತಿವೆ ಆ ಜಿಲ್ಲೆಗಳು. ಈಗಿರುವ ಅವಕಾಶವನ್ನು ಇನ್ನಷ್ಟು ವಿಸ್ತರಿಸಿ ಇಂಥ ಅರಿವು ಮೂಡಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ.

ಪ್ರಶಾಂತ್ ನೇರವಾಗಿ ಯಾವುದೇ ಗುಂಪುಗಳಲ್ಲಿ ಗುರುತಿಸಿಕೊಂಡಿಲ್ಲ. Leftist ಗುಣಗಳು ಮೈತುಂಬಾ ಇದ್ದರೂ Leftist ಎಂದು ಬ್ರಾಂಡ್ ಆಗಲಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವುದು ಪ್ರಶಾಂತ್ಗೆ ಹುಟ್ಟಿನಿಂದಲೂ ಬಂದ ಗುಣ (ಹಾಸನ ಜಿಲ್ಲೆಯವರಲ್ಲವೇ?). ಒಂದು ಕಡೆ ನಿಲ್ಲದೇ ಸುತ್ತುತ್ತಲೇ ಇರುವುದು ಅವರೇ ಆಯ್ದುಕೊಂಡ ಶಾಪ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಂಡರೆ ಹೌಹಾರುತ್ತಲೇ ಆ ಭಯವನ್ನು ತಮ್ಮ ಕೆಲಸಗಳಿಗೆ ಒಂದು ಸೂಕ್ಷ್ಮತೆ ಕಂಡುಕೊಳ್ಳಲು ಬಳಸಿಕೊಂಡಿರುವುದು ಅವರ ಧೈರ್ಯ. ಬೇರೆಯವರ ಬಗ್ಗೆ ಗೌರವವಿಟ್ಟುಕೊಂಡೇ ಅವರ ಬಗ್ಗೆ ಕಿಲಾಡಿಮಾತುಗಳನ್ನಾಡುವುದು ಅವರ ಹಾಸ್ಯಮಿಶ್ರಿತ ವೈಯಕ್ತಿಕ ವಿಮರ್ಶೆಯ ಧಾಟಿ. ತೀರಾ ಖಿನ್ನರಾದರೆ ಶೃಂಗೇರಿಯ ಶಾರದಾಂಬೆ ದೇವಸ್ಥಾನದವರೆಗೂ ಹೋಗಿ ಗಂಟೆಗಟ್ಟಲೇ ಕೂತು ಬರುವುದು ಹೆಚ್ಚಿನವರಿಗೆ ಗೊತ್ತಿರದ ವಿಷಯ. 

ಪ್ರಶಾಂತ್ ಮಾಡುತ್ತಿರುವ ಕೆಲಸಗಳಲ್ಲಿ ಅವರಿಗೆ ಯಶ ಸಿಗಲಿ ಎನ್ನುವುದು ಕನ್ನಡ ಟೈಮ್ಸ್ನ ಹಾರೈಕೆ.
ಬಾಕ್ಸ್:
ಹುಟ್ಟಿದ್ದು: 1970, ಡಿಸೆಂಬರ್ 4, ಹಿರಿಸಾವೆ, ಚೆನ್ನರಾಯಪಟ್ಟಣ, ಹಾಸನ ಜಿಲ್ಲೆ.
ಓದಿದ್ದು: ಹಿರಿಸಾವೆ, ಚೆನ್ನರಾಯಪಟ್ಟಣ, ಮೈಸೂರು ವಿಶ್ವವಿದ್ಯಾಲಯ (ಸಮಾಜಶಾಸ್ತ್ರ). ಎಂಫಿಲ್ ಪದವಿ ಕುವೆಂಪು ವಿಶ್ವವಿದ್ಯಾಲಯ. ಪಿ.ಎಚ್.ಡಿ ಹಂಪಿ ಕನ್ನಡ ವಿಶ್ವವಿದ್ಯಾಲಯ.
ವೃತ್ತಿ: ಅಧ್ಯಾಪಕ, ಹಂಪಿ ಕನ್ನಡ ವಿಶ್ವವಿದ್ಯಾಲಯ.
ಪ್ರಕಟಣೆಗಳು:
1. ಕರ್ನಾಟಕದ ಜನಸಮುದಾಯ ಕೋಶ (2000)
2. ವೃದ್ಧರ ಪರಿಕಲ್ಪನೆ (2004)
3. ಬಿಸಿಯೂಟ – ಅಧ್ಯಯನ ವರದಿ (2005)
4. ಈಶಾನ್ಯ ಕರ್ನಾಟಕ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ (2005)
5. ಶಾಲಾ ಶಿಕ್ಷಣದ ವಿಕೇಂದ್ರೀಕರಣ: ಎಸ್.ಡಿ.ಎಂ.ಸಿ ಕಾರ್ಯಕ್ಷಮತೆ (2006)
6. ದಲಿತರ ಶಿಕ್ಷಣ (ಪ್ರಕಟಣೆಯ ಹಾದಿಯಲ್ಲಿ)

ಇತರೆ: ಅಭಿವೃದ್ಧಿ ಎನ್ನುವ ರೆಫರೆನ್ಸ್ ಪತ್ರಿಕೆಯ ಸಂಪಾದಕ.

 
 

28
Dec
07

ರಾಜು ಮೇಷ್ಟ್ರು ಇನ್ನಿಲ್ಲ

raju-meshtru.jpg

ಚಿ ಶ್ರೀನಿವಾಸ ರಾಜು ಮೇಷ್ಟ್ರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಂದು ಮನಸ್ಸೇ ಮುದುಡಿ ಹೋಗಿದೆ. ಸರಿ ಸುಮಾರು ಮೂರು ತಲೆಮಾರಿನ ಕವಿಗಳ ದಾರಿಗೆ ದೀಪವಾಗಿದ್ದ ಮೇಷ್ಟ್ರು ಇಂದು ಇಲ್ಲ  ಎನ್ನುವ ಸುದ್ದಿಯೇ ಬೆಳಗ್ಗೆಯಿಂದ ಮಂಕು ಕವಿಸಿದೆ..

05
Sep
07

ನಮ್ಮ ಕಾಲದ ಬಗ್ಗೆ ಅಜ್ಜಿ ಹೇಳಿದ ಕತೆ…

oldies3.jpg

ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ “ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?” ಅಂತಲೂ ಕೇಳಿದ.

ಕ್ಷಣ ಕಾಲ ಸುಮ್ಮನೇ ಯೋಚಿಸಿದ ಅಜ್ಜಿ ಹೇಳಿದಳು: “ನಾನು ಹುಟ್ಟಿದಾಗ ಇನ್ನೂ ಟಿ.ವಿ., ಪೆನ್ಸಿಲಿನ್, ಪೋಲಿಯೋ ಲಸಿಕೆ, ಜೆರಾಕ್ಸ್, ಕಾಂಟ್ಯಾಕ್ಟ್ ಲೆನ್ಸ್ ಇವ್ಯಾವೂ ಹುಟ್ಟಿರಲಿಲ್ಲ. ರಡಾರ್ ಇರಲಿಲ್ಲ, ಕ್ರೆಡಿಟ್ ಕಾರ್ಡು, ಲೇಸರ್ ಕಿರಣ… ಇವೆಲ್ಲಾ ಹೋಗಲಿ ಬಾಲ್ ಪಾಯಿಂಟ್ ಪೆನ್ನು ಕೂಡ ಹುಟ್ಟಿರಲಿಲ್ಲ. ಮನುಷ್ಯ ಇನ್ನೂ ಏರ್ ಕಂಡಿಷನರ್, ಡಿಶ್ ವಾಷರ್, ಬಟ್ಟೆ ಒಣಗಿಸೋ ಯಂತ್ರ ಯಾವುದನ್ನೂ ಕಂಡು ಹಿಡಿದಿರಲಿಲ್ಲ. ಬಟ್ಟೆಗಳನ್ನು ಬಿಸಿಲಿಗೆ ಒಳ್ಳೆ ಗಾಳಿಗೆ ಒಣಗಿಸುತ್ತಿದ್ದೆವು. ಅಷ್ಟೇ ಅಲ್ಲ, ಈಗೆಲ್ಲ ಹೆಂಗಸರು ಹಾಕುತ್ತಾರಲ್ಲ ಪ್ಯಾಂಟಿಹೋಸ್ ಅದು ಇರಲೇ ಇಲ್ಲ.

ನಿನ್ನ ಅಜ್ಜನಿಗೂ ನನಗೂ ಮೊದಲು ಮದುವೆಯಾಯಿತು ನಂತರ ನಾವು “ಲಿವಿಂಗ್ ಟುಗೆದರ್” ಅಂತ ಬದುಕಿದೆವು. ಆಗೆಲ್ಲ ಎಲ್ಲಾ ಕುಟುಂಬದಲ್ಲೂ ತಂದೆ ತಾಯಿ ಇರುತ್ತಿದ್ದರು. ನನಗೆ ೨೫ ವರ್ಷ ಆಗುವವರೆಗೂ ನನಗಿಂತ ಹಿರಿಯರಾದವರನ್ನು ಸರ್ ಅಂತಲೇ ಮಾತನಾಡಿಸುತ್ತಿದ್ದೆ. ನಂತರ ಕೂಡ ಪೊಲೀಸರು ಹಾಗೂ ಇತರೆ ಅಧಿಕಾರಿಗಳನ್ನು ಸರ್ ಅಂತಲೇ ಕರೀತಿದ್ದೆ. ನಾವೆಲ್ಲ ಈ ಕಂಪ್ಯೂಟರ್ ಡೇಟಿಂಗ್, ಡೇ ಕೇರ್ ಸೆಂಟರ್ ಗಳು, ಗ್ರೂಪ್ ಥೆರಪಿ, ಸಲಿಂಗ ಕಾಮದ ಹಕ್ಕುಗಳು ಇವನ್ನೆಲ್ಲಾ ಕೇಳೇ ಇರಲಿಲ್ಲ.

“ಫಾಸ್ಟ್ ಫುಡ್” ಅಂದರೆ ಶಿವರಾತ್ರಿ ದಿನ ತಿನ್ನುವ ತಿಂಡಿ ಅಂತ ಮಾತ್ರ ಅಂದುಕೊಂಡಿದ್ವಿ. ಒಳ್ಳೆ ಸಂಬಂಧ ಅಂದರೆ ಸಂಬಂಧಿಗಳ ಜೊತೆ ಚೆನ್ನಾಗಿರೋದು ಅನ್ನೋದು ನಮ್ಮ ಕಾಲದ ನಂಬಿಕೆ. ಮನೆಯವರ ಜೊತೆ ಕಾಲ ಕಳೆಯೋದು ಅಂದ್ರೆ ಸಂಜೆ ಮತ್ತು ರಜಾ ದಿನಗಳಲ್ಲಿ ಮನೆಯಲ್ಲಿ ಎಲ್ಲರ ಜೊತೆ ಇರುವುದು ಅಂತ ನಮ್ಮ ತಿಳುವಳಿಕೆ – ಶಾಪಿಂಗ್ ಹೋಗೋದು ಅಂತಲ್ಲ.

ನಾವೆಂದೂ ಎಫ್ ಎಂ ರೇಡಿಯೋ ಕೇಳಿರಲಿಲ್ಲ. ಟೇಪ್ ರೆಕಾರ್ಡರ್, ಸಿ.ಡಿ., ಎಲೆಕ್ಟ್ರಾನಿಕ್ ಟೈಪ್ ರೈಟರ್ ಇವ್ಯಾವೂ ನಮಗೆ ಗೊತ್ತಿರಲಿಲ್ಲ. ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳ ಭಾಷಣಗಳನ್ನು ರೇಡಿಯೋದಲ್ಲೇ ಕೇಳುತ್ತಿದ್ದುದು. ನನಗೆ ನೆನಪಿದ್ದ ಹಾಗೆ ಆಗ ಯಾವ ಹುಡುಗರೂ ಟಾಮಿ ಡೊರ್ಸೆ, ಮೈಕೆಲ್ ಜಾಕ್ಸನ್ ಹಾಡುಗಳನ್ನು ಕೇಳಿ ಹುಚ್ಚರಾಗಿರಲಿಲ್ಲ. ಈ ಪಿಜಾ ಹಟ್, ಮೆಕ್ ಡೊನಾಲ್ಡ್, ಇನ್ ಸ್ಟಂಟ್ ಕಾಫಿ ಇವನ್ನೆಲ್ಲಾ ನಾವು ಕೇಳಿರಲೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಆಗ ಹುಡುಗರ್‍ಯಾರೂ ಕಿವಿಗೆ ಓಲೆ ಹಾಕಿಕೊಳ್ತಿರಲಿಲ್ಲ.

ಆಗ ನಾಲ್ಕಾಣೆ ಎಂಟಾಣೆಗೆ ಎಷ್ಟೆಲ್ಲಾ ವಸ್ತುಗಳು ಸಿಗುತ್ತಿದ್ದವು. ೩೦,೦೦೦ ಕೊಟ್ಟರೆ ಒಳ್ಳೆ ಕಾರ್ ಸಿಗುತ್ತಿತ್ತು. ಆದರೆ ಅಷ್ಟೊಂದು ದುಬಾರಿ ಬೆಲೆಗೆ ಕೊಳ್ಳೋದು ಯಾರಿಗೆ ಸಾಧ್ಯವಿತ್ತು? ಎಂಟಾಣೆಗೆ ಲೀಟರ್ ಪೆಟ್ರೋಲ್ ಬೇರೆ ಹಾಕಬೇಕಿತ್ತಲ್ಲ! ಆಗ ಇಲ್ಲೇ ಇರುವ ಊರಿಂದೂರಿಗೆ ನಾವು ಪತ್ರ ಬರೆಯುತ್ತಿದ್ದೆವು. ಹೊರ ರಾಜ್ಯಕ್ಕಾದರೆ ಪೋಸ್ಟ್ ಆಫೀಸಿನ ಮುಂದೆ ಅರ್ಧ ದಿನ ಕಳೆದು “ಟ್ರಂಕ್ ಕಾಲ್” ಮಾಡುತ್ತಿದ್ದೆವು. ಮೊಬೈಲು ಎನ್ನುವ ಫೋನಿನ ಕಲ್ಪನೆಯೇ ನಮಗಿರಲಿಲ್ಲ.

ನಮ್ಮ ಕಾಲದಲ್ಲಿ “ಗ್ರಾಸ್” ಅಂದರೆ ಹುಲ್ಲು ಅಂತ ಅರ್ಥ ಇತ್ತು. “ಕೋಕ್” ಅಂದರೆ ಶರಬತ್, “ಪಾಟ್” ಅಂದರೆ ನಮ್ಮಮ್ಮ ಅಡಿಗೆ ಮಾಡುತ್ತಿದ್ದ ಪಾತ್ರೆ. ನಮ್ಮ ಅಜ್ಜಿಯರು ಹಾಡುತ್ತಿದ್ದ ಜೋಗುಳವೇ ನಮಗೆ “ರಾಕ್ ಮ್ಯೂಸಿಕ್.” ಆಗೆಲ್ಲ “ಏಡ್ಸ್” ಅಂದರೆ ಬೇರೆಯವರಿಗೆ ಧನ ಸಹಾಯ ಅಂತಿದ್ದರೆ “ಚಿಪ್” ಅನ್ನುವುದು ತೆಂಗಿನ ಕರಟ ಅಂತ ಗೊತ್ತಿತ್ತು. “ಹಾರ್ಡ್ ವೇರ್” ಅನ್ನುವುದು ಕಬ್ಬಿಣದ ಅಂಗಡಿಯಾಗಿದ್ದರೆ, “ಸಾಫ್ಟ್ ವೇರ್” ಅನ್ನೋ ಪದ ಹುಟ್ಟೇ ಇರಲಿಲ್ಲ.

ಮಕ್ಕಳಾಗಬೇಕೆಂದರೆ ಗಂಡ ಬೇಕು ಅಂದುಕೊಂಡಿದ್ದವರಲ್ಲಿ ನಾವೇ ಕೊನೆಯ ಜನರೇಶನ್ ನವರಿರಬೇಕು. ನಮ್ಮನ್ನು ಜನ “ಹಳೆ ಕಾಲದವರು” ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತೆ ಜನರೇಶನ್ ಗ್ಯಾಪ್ ಅಂತಲೂ ಮಾತನಾಡುತ್ತಾರೆ. ಎಲ್ಲ ಎಷ್ಟು ಬೇಗ ಬದಲಾಯಿತು!” ಹೀಗೆ ಮೊಮ್ಮಗನಿಗೆ ತನ್ನ ಕಥೆ ಹೇಳಿದ ಅಜ್ಜಿ ಮತ್ತೆ ಯೋಚಿಸುತ್ತ ಕೂತಳು.

ಮೊಮ್ಮಗನಿಗೆ ಅಚ್ಚರಿ! ಅವನ ಮನದಲ್ಲಿ ದೊಡ್ಡ ಪ್ರಶ್ನೆ: ಹಾಗಾದರೆ ಈ ಅಜ್ಜಿ ಎಷ್ಟು ಶತಮಾನದ ಹಿಂದಿನವಳು?

ಈ ಕಥೆ ಓದುತ್ತ, ಅಜ್ಜಿ ಹೇಳುತ್ತಿದ್ದ ಎಲ್ಲವೂ ಈಗ ಬೇರೆಯೇ ಆಗಿರುವುದನ್ನು ಯೋಚಿಸುತ್ತ ನನಗೆ ಒಂದು ಕ್ಷಣ ದಂಗು ಬಡಿದಂತಾಗಿತ್ತು. ಅಜ್ಜಿಯ ಕಾಲಕ್ಕೂ – ನಮ್ಮ ಕಾಲಕ್ಕೂ ಬದುಕಿನ ಅರ್ಥವೇ ಬದಲಾಗಿದೆಯಲ್ಲ! ಸಮಾಜದ ದಿಕ್ಕೇ ಬದಲಾಗಿದೆಯಲ್ಲ! ಅಂದುಕೊಳ್ಳುತ್ತ, ಅಜ್ಜಿಯ ವಯಸ್ಸಿನ ಬಗ್ಗೆ ಕುತೂಹಲ ಇಮ್ಮಡಿಯಾಯಿತು.

ನಿಮಗೇನಾದರೂ ಗೊತ್ತೆ ಈ ಅಜ್ಜಿ ಎಷ್ಟು ಹಳಬಳಿರಬಹುದೆಂದು? ಮೊಮ್ಮಗನ ಈ ಪ್ರಶ್ನೆಗೆ ಅಜ್ಜಿ ನಗುತ್ತ ಹೇಳಿದ್ದು: ನನಗೀಗ ೫೮ ವರ್ಷ ಮಗುವೆ.

***

ಕಥೆ ಓದಿದ ಯಾರಿಗಾದರೂ ಕಳೆದ ೫೦ ವರ್ಷಗಳಲ್ಲಿ ನಮ್ಮ ಬದುಕಿನಲ್ಲಾಗಿರುವ ಬದಲಾವಣೆಗಳ ಬಗ್ಗೆ ಒಂದು ಸಣ್ಣ ಅಚ್ಚರಿಯಾಗುವುದು ಖಚಿತ. ಇಂದು ಜಗತ್ತಿನ ಪ್ರಮುಖ ದಿನಬಳಕೆ ವಸ್ತುಗಳನ್ನೆಲ್ಲ ಸಾವಿರಾರು ವರ್ಷಗಳಿಂದಲೂ ಬಲ್ಲವರಂತೆ ಬಳಸುವ ನಮಗೆ, ನಮ್ಮ ವೇಗ ಭಯ ಹುಟ್ಟಿಸದಿರುವುದು “ಆರುವ ಮೊದಲು ಜೋರಾಗಿ ಉರಿವ ದೀಪ”ದ ನೆನಪು ತರುವುದಿಲ್ಲವೆ?

30
Aug
07

ಒಂದು ವಿದಾಯ ಪತ್ರ

ಸಿಗರೇಟು ಬಿಡುವ ಬಗ್ಗೆ ಸಿಗರೇಟು ಸೇದುವ ಎಲ್ಲರೂ ಒಂದಿಲ್ಲೊಮ್ಮೆ ಅಥವಾ ಆಗಾಗ್ಗೆ ಯೋಚಿಸುತ್ತಲೇ ಇರುತ್ತಾರೆ. ಆದರೆ ಸಿಗರೇಟಿಗೆ ಅಂಟಿಕೊಳ್ಳುವ ಸುಖ ಮತ್ತು ಅದರ ಯಾತನೆ ಅವರಿಗೇ ಗೊತ್ತು. about.com ಎನ್ನುವ ವೆಬ್ ಸೈಟಿನಲ್ಲಿ ಸಿಗರೇಟು ಬಿಡಲು ಪ್ರಯತ್ನಿಸುತ್ತಿರುವವರು ಮಾತನಾಡಿಕೊಳ್ಳಲು ಇರುವ ಜಾಗದಲ್ಲಿ ಜಾನ್ ಎನ್ನುವವನೊಬ್ಬ ತಾನು ಕೊನೆಯ ಸಿಗರೇಟಿನೊಂದಿಗೆ ಮಾತನಾಡುತ್ತ ಬರೆದ ಈ ಪತ್ರ ಪ್ರಕಟಿಸಿದ. ಅದನ್ನು ಓದಿದ ಹಲವರು ಇದು ನನ್ನದೇ ಅಭಿಪ್ರಾಯ ಎನ್ನತೊಡಗಿದರು. ಈಗ ಈ ಪತ್ರ ಜಗತ್ತಿನ ಪ್ರಸಿದ್ದ ಪ್ರೇಮ ವಿದಾಯ ಪತ್ರಗಳ ಸಾಲಿಗೂ ಸೇರಿದೆ. ನಿಮಗೂ ಈ ಪತ್ರ ಓದಿಸಬೇಕೆನ್ನಿಸಿತು ಹಾಗಾಗಿ ಅದರ ಕನ್ನಡ ಪಾಠವನ್ನು ಕೊಟ್ಟಿದ್ದೇನೆ. ಜೊತೆಗೆ ನೀವು ಸಿಗರೇಟಿಗೆ ವಿದಾಯ ಪತ್ರ ಬರೆಯುತ್ತಿದ್ದರೆ ಅಥವಾ ಮುಂದೆಂದಾದರೂ ಬರೆದರೆ ದಯವಿಟ್ಟು ನನಗೂ ಕಳುಹಿಸಿಕೊಡಿ.

ಪ್ರಿಯೆ,
ನನ್ನ ನಿನ್ನ ನಡುವೆ ಇರುವ ಇಷ್ಟು ವರ್ಷದ ನಂಟಿನ ಬಗ್ಗೆ ಏನು ಹೇಳಲಿ? ಈ ಸಂಬಂಧ ನನ್ನ ಬದುಕಿನ ಉಳಿದೆಲ್ಲ ಸಂಬಂಧಗಳಿಗಿಂತ ಗಟ್ಟಿ ಎನ್ನುವುದು ಸುಳ್ಳಲ್ಲ.
ನಾನು ಒಂಟಿ ಅನ್ನಿಸಿದಾಗೆಲ್ಲ ನೀನು ನನ್ನೊಂದಿಗಿದ್ದೆ.
ನಾನು ಭಯಭೀತನಾಗಿದ್ದಾಗ ನನಗೆ ಬೆಂಬಲ ನೀಡಿದ್ದೆ.
ನನಗೆ ಖುಷಿಯಾದಾಗ ನೀನೂ ಅದನ್ನು ಹಂಚಿಕೊಂಡಿದ್ದೆ.
ನನಗೆ ಸಿಟ್ಟು ಬಂದಾಗ ನೀನು ಆ ಸಿಟ್ಟಿಗಾಗಿ ನಿನ್ನನ್ನೂ ಸುಟ್ಟುಕೊಂಡಿದ್ದೆ.
ನನಗೆ ಹಸಿವಾದಾಗ ನೀನು ಅದನ್ನು ತಣ್ಣಗಾಗಿಸಿ ನನ್ನನ್ನು ತೆಳ್ಳಗೇ ಉಳಿಸಿದ್ದೆ.
ನಾನು ನಿನ್ನನ್ನು ತೊರೆದು ಹೋದಾಗಲೂ ನೀನು ತಣ್ಣಗೆ ನಾನು ಮತ್ತೆ ಬರುವೆನೆಂದು ಕಾದೆ.
ನೀನು ಎಂದೂ ನನ್ನನ್ನು ಒಂದು ಅಭಿಪ್ರಾಯದಿಂದ ಬಂಧಿಸಲಿಲ್ಲ ಅಥವಾ ನನ್ನ ಮೇಲೆ ದ್ವೇಷ ಸಾಧಿಸಲಿಲ್ಲ.
ನಾನು ಮತ್ತೆ ನಿನ್ನನರಸಿ ಬಂದಾಗ ನಿನ್ನ ವಿಶಾಲ ತೋಳುಗಳಿಂದ ಸ್ವಾಗತಿಸಿದೆ. ನೀನು ನಿಜವಾಗಿಯೂ ಅದ್ಭುತ ಪ್ರೇಯಸಿ. ನಾವಿಬ್ಬರೂ ಒಬ್ಬರನ್ನು ಒಬ್ಬರು ಹತ್ತಿರದಿಂದ ಬಲ್ಲೆವು. ನಿನ್ನ ವಾಸನೆಯ ಎಳೆಯೊಂದು ಸಾಕು – ನನ್ನ ಹೃದಯದ ಬಡಿತ ಏರಿಸಲು. ಎಷ್ಟಾದರೂ ನನ್ನ ನವರಂಧ್ರಗಳನ್ನೂ ಬಗೆದವಳಲ್ಲವೇ ನೀನು! ನಾನು ನಿನ್ನ ಬಳಸಿ ಹಿಡಿದಾಗ – ಓಹ್ ಅದೆಂಥ ಬಿಗಿಯಾದ ಮತ್ತು ನೀಳ ಮೈಕಟ್ಟು ನಿನ್ನದು! – ನನ್ನ ನರನಾಡಿಗಳಲ್ಲೆಲ್ಲ ರಕ್ತ ಬಿರಬಿರನೆ ಹರಿದಾಡುತ್ತದೆ. ಓ ದೇವರೇ, ನನಗೆ ನೀನು ಬೇಕೇ ಬೇಕು. ನಾವು ಇಷ್ಟು ವರ್ಷ ಹತ್ತಿರ ಹತ್ತಿರಾಗಿ ಬದುಕಿದ್ದೀವಲ್ಲ ಹಾಗೆ.

ಪ್ರಿಯೆ ನಿನಗೆ ಗೊತ್ತೆ, ಮೊದಲು ನಿನ್ನೊಂದಿಗೆ ಸಂಬಂಧ ಮಾಡಿದೆನಲ್ಲ ಆಗ ನಾನು ನಮ್ಮ ವಿಷಯವನ್ನು ಎಲ್ಲರಿಂದಲೂ ಮುಚ್ಚಿಟ್ಟಿದ್ದೆ. ನಂತರ ಕೂಡ ಹಲವರಿಗೆ ಗೊತ್ತಾದಾಗಲೂ ನಾನು ನಿನ್ನೊಂದಿಗೆ ತುಂಬ ಪ್ರೈವೇಟಾಗಿಯೇ ಇರಲು ಬಯಸುತ್ತಿದ್ದೆ. ಅದೆಲ್ಲ ಹೋಗಲಿ ಈಗಲೂ ಸಹ ನಿನ್ನ ಜೊತೆ ಜನಗಳ ನಡುವೆ ಹೋದಾಗ ಮುಜುಗರ ಅನುಭವಿಸದಿರುವುದು ಸಾಧ್ಯವೇ? ನಾನು ಅದೆಷ್ಟು ಬಾರಿ ನಿನ್ನ ಸೇರುವ ಹಪಹಪಿಕೆಗಾಗಿ ನನ್ನ ಮಕ್ಕಳನ್ನು ಕಾಯಿಸಿಲ್ಲ. ಹಾಗೆ ನೋಡಿದರೆ ನೀನು ನನ್ನ ಮಕ್ಕಳಿಗಿಂತೇನೂ ಮುಖ್ಯವಲ್ಲವಲ್ಲ. ನನಗೆ ಹೀಗೆ ನನ್ನ ಮಕ್ಕಳಿಗಿಂತಲೂ ನಿನಗೆ ಮಣೆ ಹಾಕಿದ್ದಕ್ಕಾಗಿ ಎಷ್ಟೋ ಸಾರಿ ನನ್ನ ಮೇಲೇ ಸಿಟ್ಟು ಬಂದದ್ದಿದೆ. ಆದರೆ, ನಿನಗೆ ನನ್ನ ಮೇಲೆ ಅಂಥದೊಂದು ಅಧಿಕಾರ ಇದೆ. ನನ್ನ ಮಕ್ಕಳು ಬಿಟ್ಟು ಹೋದರೂ ನೀನು ನನ್ನ ಬಿಡುವ ಯೋಚನೆ ಮಾಡಲಾರೆ ಎನ್ನುವುದು ನನಗೆ ಗೊತ್ತು. ಅದರಿಂದಲೇ ನಾನು ಅನಾರೋಗ್ಯದಿಂದ ಮಲಗಿದಾಗಲೂ ನೀನು ಕರೆದಾಗ ಒಂದೂ ಮಾತಾಡದೆ ನಿನ್ನಲ್ಲಿಗೆ ಬಂದು ಬಿಟ್ಟದ್ದು.
ಪ್ರಿಯೆ, ನಿನಗೆ ಈಗ ಹೇಗೆ ಹೇಳಬೇಕೋ ತಿಳಿಯದಾಗಿದೆ. ನಾನು ನಿನ್ನಿಂದ ದೂರವಾಗಬೇಕಿದೆ. ನಾನೀಗ ನಿನಗೆ ಗುಡ್ಬೈ ಹೇಳಲು ಈ ಪತ್ರ ಬರೆಯುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ಪ್ರೀತಿಸುತ್ತಲೇ ಇರುತ್ತೇನೆ. ಆದರೆ ಈ ಪ್ರೀತಿಯೇ ನನ್ನನ್ನು ಕೊಲ್ಲುತ್ತಿದೆ. ಇಂಥ ಅಗಾಧ ಪ್ರೀತಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ನನಗೀಗ ಅರಿವಾಗುತ್ತಿದೆ. ನಾನು ಬದಲಾಗಿದ್ದೇನೆ, ಬೆಳೆದಿದ್ದೇನೆ. ಆದರೆ, ನೀನಿನ್ನೂ ಹಾಗೇ ಇದ್ದೀಯ. ಈಗೊಂದಿಷ್ಟು ಕಾಲದಿಂದ ನಮ್ಮ ದಾರಿಗಳು ಬೇರೆ ಬೇರೆಯಾಗುತ್ತಿವೆ. ಆದರೆ ಹಾಗಂತ ನಂಬಲು ನಾನೇ ತಯಾರಿರಲಿಲ್ಲ. ಆದರೆ ಈಗ ನನಗೆ ಅದರ ಅರಿವಾಗುತ್ತಿದೆ.
ನೀನು ನನ್ನ ಮುಖದ ಮೇಲೆ ಸುಕ್ಕುಗಳನ್ನು ತರಿಸಿದ್ದೀಯ. ನನ್ನ ಅಗಾಧ ಹಣವನ್ನು ನಿನ್ನ ಮೇಲೆ ಸುರಿದಿದ್ದೇನೆ. ನಿನ್ನಿಂದಾಗಿ ನನ್ನ ಉಸಿರಿನಲ್ಲಿ ವಾಸನೆ ತುಂಬಿದೆ ಜೊತೆಗೆ ನನ್ನ ಹಲ್ಲುಗಳೂ ಹಳದಿಗಟ್ಟಿವೆ. ನನ್ನ ಗೆಳೆಯರು ನಿನ್ನನ್ನು ಒಪ್ಪುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನೀನು ನನ್ನ ಅಜ್ಜನಿಗೆ ತಂದಿಟ್ಟಿರುವ ಸ್ಥಿತಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಾನೂ ಸಹ ಹಾಗಾಗಲು ಬಯಸುವುದಿಲ್ಲ.
ಹೀಗೆಲ್ಲ ಅಂದುಕೊಳ್ಳುತ್ತಿರುವಾಗ ಏನೋ ಯಾತನೆಯಾಗುತ್ತಿದೆ. ನಾವು ಯಾವಾಗಲೂ ಜೊತೆಗೇ ಇದ್ದೆವು. ನೀನಿಲ್ಲದ ನನ್ನನ್ನು ಎಂದಾದರೂ ಯೋಚಿಸಿಕೊಂಡಿದ್ದೆನೇ?
ನೀನು ನನ್ನನ್ನು ವೀಕ್ ಅಂದುಕೊಂಡಿರಬಹುದು. ನಾನು ಮತ್ತೆ ನಿನ್ನ ತೆಕ್ಕೆಗೆ ಬೀಳುತ್ತೇನೆ ಎನ್ನುವ ನಂಬಿಕೆಯೂ ನಿನಗಿರಬಹುದು. ಆದರೆ ಇನ್ನು ನಾನು ವೀಕ್ ಅಲ್ಲ. ನಿನ್ನ ವಿಚಾರದಲ್ಲಿ ನಾನೆಷ್ಟು ಗಟ್ಟಿಗ ಎನ್ನುವುದನ್ನು ನಾನು ಕಂಡುಕೊಳ್ಳಲೇ ಬೇಕಿದೆ. ಮುಂದೆಂದೋ ಮಳೆಗಾಲದ ರಾತ್ರಿಯೊಂದರಲ್ಲಿ ಹೆಂಡತಿ ಮಕ್ಕಳು ಹಾಸಿಗೆಯಲ್ಲಿ ಸುಖವಾಗಿರುವಾಗ ಮತ್ತೆ ನಿನ್ನ ಹಳೆಯ ಚಿತ್ರದೊಂದಿಗೆ ಬರುವೆನೆಂದು ಕಾಯಬೇಡ. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆಂದು ನಿನಗೆ ಗೊತ್ತು. ಈ ಹದಿನಾಲ್ಕು ವರ್ಷಗಳ ನಮ್ಮ ಸಂಬಂಧವನ್ನು ಗಾಳಿಗೆ ತೂರುತ್ತಿದ್ದೇನೆ ಎಂದುಕೊಳ್ಳಬೇಡ ಚೆಲುವೆ. ನನ್ನ ಮುಂದಿನ ಬದುಕೂ ಅಷ್ಟೇ ಮುಖ್ಯವಲ್ಲವೇ? ಈಗಲಾದರೂ ನನಗೇನು ಮುಖ್ಯ ಅಂತ ಯೋಚಿಸುವುದು ತಪ್ಪೇ?
ನಿನ್ನಿಂದ ದೂರವಾಗುವುದು ವಿವರಿಸಲಾಗದ ನೋವು ತರುತ್ತಿದೆ. ನಾನಿಲ್ಲಿ ರಾತ್ರಿ ನಿನ್ನದೇ ಯೋಚನೆಯಲ್ಲಿ ನಿನ್ನಲ್ಲಿ ಕಳಕೊಂಡವನಂತೆ ಬಿದ್ದಿರುವ ಪಾಡು ನಿನಗರ್ಥವಾಗದೇ? ಯಾರಾದರೂ ನನಗೆ ಬೇಸರ ಮಾಡಿದ ಕ್ಷಣ ನಿನ್ನ ಬಳಿಗೆ ಓಡಿ ಬರೋಣವೆನ್ನಿಸುತ್ತೆ. ನಿಜವಾಗಿ ಹೇಳಬೇಕೆಂದರೆ ನಿನ್ನ ಕುರಿತು ಯೋಚಿಸುವಾಗೆಲ್ಲ ನನ್ನ ಮೈ ಬಿಗಿಯುತ್ತದೆ. ಗಂಟಲ ನರನಾಡಿಗಳೆಲ್ಲ ಹುರಿಗಟ್ಟಿದಂತೆ ಅನಿಸುತ್ತದೆ. ನಿನ್ನ ಬಳಿಬಂದರೆ ಅದನ್ನೆಲ್ಲ ಸಡಿಲಗೊಳಿಸಿಬಿಡಬಲ್ಲೆ ನೀನು. ಆದರೆ ಅದೆಲ್ಲ ಕ್ಷಣಿಕ. ನಿನಗೆ ನಾನು ಹೆಚ್ಚು ಹೆಚ್ಚು ನಿನ್ನ ಜೊತೆಗಿರುವುದು ಬೇಕು. ನಿನ್ನನ್ನು ಪ್ರೀತಿಸುವುದೆಂದರೆ ನನ್ನನ್ನೇ ನಾಶಪಡಿಸಿಕೊಳ್ಳುವ ವಿಷ ವರ್ತುಲದಂತೆ ಅನ್ನುವುದು ಅರ್ಥವಾಗುತ್ತಿದೆ.
ಈಗ ನನಗಾಗುತ್ತಿರುವ ನೋವು ಕಾಲ ಕಳೆದಂತೆ ಮಾಯುತ್ತದೆ. ಹಾಗೆಯೇ ನೀನು ನನ್ನ ಹೃದಯ ಮತ್ತು ಯಕೃತ್ತಿನ ಮೇಲೆ ಮೂಡಿಸಿರುವ ಗೀರುಗಳೂ ಮಾಯುತ್ತವೆ. ನಿನ್ನ ಪ್ರೇಮದಲ್ಲಿ ಶಿಥಿಲವಾಗಿರುವ ನನ್ನ ದೇಹಕ್ಕೆ ಹೊಸ ಉಸಿರು ಬೇಗನೇ ಬರಲಿ ಎಂದು ದೇವರಲ್ಲಿ ಮೊರೆಯಿಡುತ್ತಿದ್ದೇನೆ. ಈ ನೋವು ನನ್ನನ್ನು ಕೊಲ್ಲಲಾರದು. ಆದರೆ ಇದೇ ನೋವು ನನ್ನನ್ನು ಗಟ್ಟಿಗೊಳಿಸಬಹುದಲ್ಲವೇ!
ನಿನಗೇನು ನನ್ನಂಥ ಹಲವರು ನಿನಗೆ ಸಿಗುತ್ತಾರೆ… ಯುವಕರು, ಹಸಿ ಹಸಿಯಾಗಿ ನಿನ್ನನ್ನು ಆಸ್ವಾದಿಸುವವರು, ಜೊತೆಗೆ ಹುಡುಗಿಯರೂ. ನೀನು ಒಂಟಿಯಾಗಿರುದು ಸಾಧ್ಯವೇ ಇಲ್ಲ. ನಾನು ಆಗಿಂದಾಗ್ಗೆ ನಿನ್ನ ಕುರಿತು ಹಲುಬಬಹುದು. ಆದರೆ ನಿನ್ನೆಡೆಗೆ ಮತ್ತೆ ಬರಲಾರೆ.
ಇನ್ನು ನನ್ನ ಬರುವನ್ನು ನಿರೀಕ್ಷಿಸಬೇಡ ಒಲವೇ.
ನಿನ್ನ
ಜಾನ್

30
Aug
07

ಕ್ರೆಡಿಟ್ ಕಾರ್ಡ್ ಬಳಸುವವರೇ ಎಚ್ಚರ

ಕ್ರೆಡಿಟ್ ಕಾರ್ಡ್

ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ, ಮೈತುಂಬಾ ಕಣ್ಣುಗಳಿರಬೇಕಾದ ಕಾಲವಿದು. ಕ್ರೆಡಿಟ್ ಕಾರ್ಡ್ಗಳನ್ನು ಎದ್ವಾ ತದ್ವಾ ಬಳಸಿ ಪೇಚಿಗೆ ಸಿಕ್ಕಿಕೊಳ್ಳುವವರ ಕಷ್ಟ ಒಂದು ಕಡೆಯಾದರೆ, ತಮ್ಮ ತಪ್ಪೇನೂ ಇಲ್ಲದೆ ಬೇರೆಯವರ ವಂಚನೆಗೆ ಗುರಿಯಾಗಿ ಫಜೀತಿಗೆ ಸಿಕ್ಕಿಕೊಳ್ಳುವವರ ಗೋಳು ಇನ್ನೊಂದು ಕಡೆ. ಇತ್ತೀಚೆಗೆ ಮುಂಬಯಿಯಲ್ಲಿ ಪತ್ತೆ ಹಚ್ಚಲಾಗಿರುವ ಪ್ರಸಂಗವೊಂದನ್ನು ನೋಡಿ.

ಮುಂಬಯಿಯ ಬಾಂದ್ರಾ ಏರಿಯಾದಲ್ಲಿ ಕಿಂಗ್ಸ್ ಇಂಟರ್ ನ್ಯಾಷನಲ್ ಎನ್ನುವ ಒಂದು ಒಳ್ಳೆಯ ಹೊಟೇಲ್ ಇದೆ. ಅಲ್ಲಿಗೆ ಹೋಗುವ ಬಹುಪಾಲು ಜನರು ಬಿಲ್ ಕೊಡಲು ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಾರೆ. ಹಾಗೆಯೇ ಕ್ರೆಡಿಟ್ ಕಾರ್ಡ್ ಬಳಸಿ ಹಣ ನೀಡಿದವರಲ್ಲಿ ಕೆಲವರು ನಂತರ ಬಂದ ಬಿಲ್ ನೋಡಿ ಕಂಗಾಲಾದರು. ಅವರು ಬಳಸಿದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ಬಿಲ್ ಅವರಿಗೆ ರವಾನೆಯಾಗಿತ್ತು. ಆವರೆಲ್ಲ ತಮ್ಮ ತಮ್ಮ ಬ್ಯಾಂಕುಗಳಿಗೆ ದೂರು ನೀಡಿದರು. ಬ್ಯಾಂಕುಗಳೂ ಸಹ ಪೊಲೀಸರಿಗೆ ದೂರು ನೀಡಿದವು. ನಂತರ ಶುರುವಾದ ಪತ್ತೆದಾರಿಕೆಯಲ್ಲಿ ಬೆಳಕಿಗೆ ಬಂದ ಅಂಶಗಳು ಎಂಥವರನ್ನೂ ಚಿಂತೆಗೀಡು ಮಾಡುವಂಥವು.

ಆದದ್ದು ಹೇಗೆ?

ಪೊಲೀಸರು ಇನ್ವೆಸ್ಟಿಗೇಷನ್ ಮಾಡುವಾಗ ಗೊತ್ತಾದ ಒಂದು ವಿಷಯವೆಂದರೆ ಕ್ರೆಡಿಟ್ ಕಾರ್ಡ್ ದುರ್ಬಳಕೆಯಾದ ಅಷ್ಟೂ ಜನರು ಕಿಂಗ್ಸ್ ಇಂಟರ್ ನ್ಯಾಷನಲ್ ಹೊಟೆಲ್ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ನೀಡಿದವರು. ಆಗಾಗ ಇವರೆಲ್ಲ ಆ ಹೊಟೇಲಿಗೆ ಹೋಗುತ್ತಿದ್ದುದು ಸಾಮಾನ್ಯವಾದ ಸಂಗತಿಯಾಗಿತ್ತು. ಅಷ್ಟೂ ಜನರೂ ಒಬ್ಬನೇ ಮಾಣಿಯ ಬಳಿ ತಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಕೊಟ್ಟಿದ್ದರು. ಇಷ್ಟು ವಿವರ ಸಿಕ್ಕಿದ ಮೇಲೆ ಪೊಲೀಸರು ಆ ಹೊಟೇಲಿನ ಮಾಣಿಯನ್ನು ಹಿಡಿದು ನಾಲ್ಕು ಚಚ್ಚುವಷ್ಟರಲ್ಲೆ ಅವನು ಎಲ್ಲವನ್ನೂ ಬಾಯ್ಬಿಟ್ಟ.

ಬಾಂದ್ರಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ 19 ವರ್ಷದ ಹುಡುಗ ಲಿಯೋ ಪಾಲ್ ಮತ್ತವನ ಮೂರುಜನ ಸ್ನೇಹಿತರು ಈ ಕೃತ್ಯದ ಹಿಂದಿದ್ದರು. ಲಿಯೋ ಒಮ್ಮೆ ‘ಮ್ಯಾಗ್ನೆಟಿಕ್ ಕಾರ್ಡ್ ರೀಡರ್’ ಒಂದರ ಬಗ್ಗೆ ಓದಿದ್ದನಂತೆ. ಅದು ಕ್ರೆಡಿಟ್ ಅಥವಾ ಆ ಥರದ ಕಾರ್ಡ್ಗಳಲ್ಲಿ ಇರುವ ಮಾಹಿತಿಯನ್ನು ಓದಬಲ್ಲಂಥ ಒಂದು ಚಿಕ್ಕ ಯಂತ್ರ. ಭಾರತದಲ್ಲಿ ಅದು ಲಭ್ಯವಿಲ್ಲ. ಆದ್ದರಿಂದ ಅದನ್ನು ಈ ಹುಡುಗರು ‘ಇ ಬೇ’ ಎನ್ನುವ ವೆಬೆಸೈಟಿನ ಮೂಲಕ ಕೊಳ್ಳುತ್ತಾರೆ. ಅದು ಅಮೆರಿಕಾದಿಂದ ಇವರಿಗೆ ದೊರಕುತ್ತದೆ. ಅದನ್ನು ಒಂದು ಕಂಪ್ಯೂಟರ್ಗೆ ಹೊಂದಿಸಿ ಬೇರೆ ಕಾರ್ಡ್ಗಳ ಮಾಹಿತಿಯನ್ನು ಕಂಪ್ಯೂಟರ್ಗೆ ಶೇಖರಿಸುವ ವ್ಯವಸ್ಥೆಯನ್ನೂ ಮಾಡುತ್ತಾರೆ. ಆ ಮಾಹಿತಿಯನ್ನು ಕಂಪ್ಯೂಟರ್ನಿಂದ ಮಾರುಕಟ್ಟೆಯಲ್ಲಿ ಸಿಗುವ ಖಾಲಿ ಕಾರ್ಡ್ಗಳಿಗೆ ರವಾನಿಸಿ, ಅವುಗಳನ್ನು ಬಳಸುವುದು ಇವರ ಉದ್ದೇಶ. ಎಲ್ಲವೂ ಇವರಂದುಕೊಂಡಂತೆ ಸರಿಯಾಗಿಯೇ ನಡೆಯಿತು. ಒಂದು ಕಾರ್ಡ್ನ ಮಾಹಿತಿಯನ್ನು ಮತ್ತೊಂದು ಖಾಲಿ ಕಾರ್ಡ್ಗೆ ಹಾಕಿ ಅದನ್ನು ಬಳಸಿ ನೋಡಿದರು. ಏನೂ ತೊಂದರೆಯಾಗಲಿಲ್ಲ. ಆಗ ಅವರು ಮಾಡಿದ್ದು ಬೇರೆಯವರ ಕ್ರೆಡಿಟ್ ಕಾರ್ಡ್ಗಳ ಮಾಹಿತಿ ಕದಿಯುವ ಯೋಜನೆ. ಅದಕ್ಕಾಗಿ ಅವರು ಬಾಂದ್ರಾದ ಈ ಪ್ರತಿಷ್ಟಿತ ಹೋಟೆಲನ್ನು, ಅಲ್ಲಿಯ ಮಾಣಿಯೊಬ್ಬನನ್ನು ಮೊದಲು ಬುಕ್ ಮಾಡುತ್ತಾರೆ. ಅದರ ಪ್ರಕಾರ ಆ ಮಾಣಿ ಗ್ರಾಹಕರು ಕೊಟ್ಟ ಕ್ರೆಡಿಟ್ ಕಾರ್ಡ್ನ ಮೂಲಕ ಬಿಲ್ ಪಾವತಿಸಿದ ಮೇಲೆ ಆ ಕಾರ್ಡನ್ನು ಲಿಯೋಗೆ ಕೊಡುತ್ತಾನೆ. ಆಗ ಲಿಯೋ, ಆರಿಂಚು ಉದ್ದದ – ಜೇಬಿನಲ್ಲೇ ಇಟ್ಟುಕೊಳ್ಳಬಹುದಾದ ‘ಮ್ಯಾಗ್ನೆಟಿಕ್ ಕಾರ್ಡ್ ರೀಡರ್’ಗೆ ಒಮ್ಮೆ ಅದನ್ನು ಉಜ್ಜುತ್ತಾನೆ. ಆಗ ಆ ಕಾರ್ಡ್ನ ಮಾಹಿತಿ ಅದರಲ್ಲಿ ಶೇಖರವಾಗುತ್ತದೆ. ಅದನ್ನು ಮನೆಗೆ ತಂದು, ಕಂಪ್ಯೂಟರಿಗೆ ಮಾಹಿತಿ ಹಾಕಿ ಅದರಿಂದ ಖಾಲಿ ಕಾರ್ಡ್ಗೆ ಮಾಹಿತಿ ರವಾನಿಸುತ್ತಾನೆ. ಆದನ್ನು ಎಲ್ಲಿ ಬೇಕಾದರೂ ಬಳಸಬಹುದು. ಹಾಗೆ ಸುಮಾರು 22 ಕಾರ್ಡ್ಗಳನ್ನು ಡೂಪ್ಲಿಕೇಟ್ ಮಾಡಿ ಸುಮಾರು 3 ಲಕ್ಷದಷ್ಟು ಹಣ, ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಕೊನೆಗೂ ಪೊಲೀಸರಿಗೆ ಸಿಕ್ಕು ಬೀಳುತ್ತಾರೆ.

ಎಲ್ಲ ಯುವಕರೇ!
ಇದರಲ್ಲಿ ಭಾಗಿಯಾದ ಎಲ್ಲ ನಾಲ್ಕು ಜನರೂ ಯುವಕರೇ. ಮೂವರು ಇಂಜಿನಿಯರಿಂಗ್ ವಿಧ್ಯಾರ್ಥಿಗಳಾದರೆ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಅಡ್ಡದಾರಿಯಲ್ಲಿ ದುಡ್ಡು ಮಾಡಲು ಹೋಗಿ ತಮ್ಮ ಹಾಗು ತಮ್ಮ ಮನೆಯವರ ಮಾನವನ್ನೇ ಹರಾಜಿಗಿಟ್ಟರು. ಮುಂಬಯಿಯ ಪೊಲೀಸರು ಈ ಘಟನೆಯನ್ನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕ್ರೈಂ ಆಗಬಹುದೆಂದು ಊಹಿಸಿದ್ದಾರೆ. ಭಾರತದ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಯುವಕರಿಗೆ, ಅಡ್ಡದಾರಿಯ ಹಣ ಗಳಿಕೆಯ ಆಮಿಶ ಯಾವ ತೊಂದರೆಗಳನ್ನು ತಂದೊಡ್ಡುವುದೋ ಎನ್ನುವುದು ಆತಂಕ ಹುಟ್ಟಿಸುತ್ತದೆ.
 

22
Jul
07

ರೂಪಾಯಿ ಹುಟ್ಟಿಸಿದ ತಲ್ಲಣ!

ಮೊನ್ನೆ ಐಟಿ ಕಂಪನಿಗಳು ತಮ್ಮ ಕಳೆದ ವರ್ಷದ ಹಾಗೂ ಕಳೆದ ತ್ರೈಮಾಸಿಕದ ಆಯವ್ಯಯ ಪಟ್ಟಿ ಬಿಡುಗಡೆ ಮಾಡಿದಾಗೆಲ್ಲ ರೂಪಾಯಿಯ ಹೆಚ್ಚಿದ ಮೌಲ್ಯದಿಂದಾಗಿ ಆದ ಪರಿಣಾಮಗಳ ಕುರಿತು ಮಾತನಾಡಿದ್ದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಇನ್‌ಫೋಸಿಸ್, ವಿಪ್ರೋ ಕಂಪನಿಗಳ ಸಿ‌ಇ‌ಓ ಗಳು ಈ ಬೆಳವಣಿಗೆಯಿಂದ ಕಂಪನಿಯ ಆದಾಯ ಕುಸಿದಿದೆ ಎಂದು ಹೇಳಿದ್ದು ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಇದೀಗ ಐಟಿ ಕಂಪನಿಗಳ ಕ್ಯಾಂಟೀನು ಹಾಗು ಸಿಗರೇಟ್ ಝೋನುಗಳಲ್ಲಿ ಹಲವರು ಈ ವಿದ್ಯಮಾನಗಳ ಕುರಿತು ಮಾತನಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಹಲವು ಮೀಡಿಯಾಗಳು ರೂಮರುಗಳನ್ನು ಬಿತ್ತಲೂ ಶುರುವಿಟ್ಟುಕೊಂಡಿದ್ದಾರೆ. ಕಳೆದೊಂದು ತಿಂಗಳಲ್ಲಿ ಏನಾಯಿತು ಎನ್ನುವುದರ ಸುತ್ತ ಒಂದು ಚಿಕ್ಕ ನೋಟ ಇಲ್ಲಿದೆ.

ನಿಮಗೆ ನೆನಪಿರಬಹುದು; ಇದೇ ಅಂಕಣದಲ್ಲಿ ತಿಂಗಳ ಹಿಂದೆ ಭಾರತದ ರೂಪಾಯಿ ಡಾಲರ್ ವಿರುದ್ದ ಬಲಗೊಳ್ಳುತ್ತಿರುವುದರ ಬಗ್ಗೆ ಬರೆದಿದ್ದೆ. ಅದು ದೇಶವೊಂದು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಾ ಹೋಗುವುದರ ಸಂಕೇತ. ಜಗತ್ತಿನ ಪ್ರಬಲ ಆರ್ಥಿಕ ವ್ಯವಸ್ಥೆಗಳ ನಡುವೆ ತನ್ನ ಬೆಳವಣಿಗೆಯನ್ನು ದಾಖಲಿಸುವ ಪರಿ. ಹಾಗೆ ಭಾರತದ ರೂಪಾಯಿ ಬಲಗೊಳ್ಳುತ್ತಾ ಸಾಗಿದಂತೆ, ಭಾರತದ ಶೇರುದಾರರು ಸಂಭ್ರಮಿಸಿದ್ದರು. ರೂಪಾಯಿಯ ಬಲಗೊಳ್ಳುವಿಕೆಯೆಂದರೆ, ಅಧಿಕ ಡಾಲರ್ ಆದಾಯ ಎನ್ನುವುದು ಶೇರುದಾರರ ಸಂತೋಷಕ್ಕೆ ಕಾರಣ. ಈ ಖುಷಿ ಭಾರತೀಯ ಶೇರು ಉದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಶೇರು ಸೂಚ್ಯಂಕ ಹಿಂದೆಂದಿಗಿಂತಲೂ ಹೆಚ್ಚು ಅಂತರಗಳನ್ನು ಮುಟ್ಟಿತು. ನಮ್ಮ ಪ್ರಧಾನಿ ಕೂಡ ಈ ಹೆಚ್ಚಳವನ್ನು ಕಾಯ್ದುಕೊಳ್ಳುವುದಾಗಿ ಶೇರುದಾರರಿಗೆ ಭರವಸೆಯನ್ನು ಕೊಟ್ಟಿದ್ದರು. ಅದೇ ಖುಷಿಯಲ್ಲಿ ಕಳೆದ ತಿಂಗಳು ಹೊಸ ಸವಾಲುಗಳನ್ನು ತಂದೊಡ್ಡಿದೆ.

ಇನ್‌ಫೋಸಿಸ್ ಆಯವ್ಯಯ ಪಟ್ಟಿ ಸಲ್ಲಿಸುತ್ತಿದ್ದಂತೆ ಈ ಬೆಳವಣಿಗೆಯಿಂದ ಭಾರತದ ಬಿಪಿ‌ಓ ಉದ್ಯಮಕ್ಕೆ ಒದಗಬಹುದಾದ ಆತಂಕಗಳು ಸ್ಪಷ್ಟವಾಗತೊಡಗಿದವು. ನಮ್ಮ ಐಟಿ ಉದ್ಯಮ ಇಲ್ಲಿ ಮಾಡುವ ಕೆಲಸಕ್ಕೆ ಗಂಟೆಗೆ ಇಂತಿಷ್ಟು ಡಾಲರ್ ಎಂದು ಹೊರದೇಶದ ಕಂಪನಿಗಳಿಂದ ತನ್ನ ರೇಟು ತೆಗೆದುಕೊಳ್ಳುತ್ತದೆ. ಅದು ಒಂದು ಗಂಟೆಗೆ ಒಬ್ಬ ಉದ್ಯೋಗಿಗೆ ೧೫ ಡಾಲರ್‌ನಿಂದ ಹಿಡಿದು ೪೦ ಡಾಲರ್ ತನಕ (ಕೆಲವೊಮ್ಮೆ ಹೆಚ್ಚು!) ಬೆಲೆ ಕಟ್ಟುತ್ತದೆ. ಅಂದರೆ, ಭಾರತದ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯೊಬ್ಬ ಒಂದು ಗಂಟೆ ದುಡಿದರೆ ಅದಕ್ಕೆ ಕಂಪನಿಯು ೧೫-೪೦ ಡಾಲರ್‌ಗಳನ್ನು ಯಾವ ಕಂಪನಿಗೆ ಆ ಕೆಲಸ ಮಾಡಿ ಕೊಡುತ್ತದೆಯೋ ಆ ಕಂಪನಿಯಿಂದ ಪಡೆಯುತ್ತದೆ. ಹಾಗೆ ಒಬ್ಬ ಉದ್ಯೋಗಿ ಇಲ್ಲಿ ದಿನಕ್ಕೆ ಎಂಟು ಗಂಟೆಗಳಂತೆ ವಾರಕ್ಕೆ ೪೦ ಗಂಟೆಗಳ ಕಾಲ ದುಡಿದರೆ, ಕಂಪನಿಯು ವಾರಕ್ಕೆ ೬೦೦-೧೬೦೦ ಡಾಲರ್‌ಗಳನ್ನು ಗಳಿಸುತ್ತದೆ. ಹಾಗೆಯೇ ತಿಂಗಳಿಗೆ ೨೪೦೦-೫೪೦೦ ಡಾಲರ್‌ಗಳನ್ನು ಗಳಿಸುತ್ತದೆ. ಅದರಲ್ಲಿ ಕಂಪನಿಯು ಇಲ್ಲಿ ಉದ್ಯೋಗಿಗೆ ಅಂತರರಾಷ್ಟ್ರೀಯ ಕೆಲಸದ ವಾತಾವರಣ, ಸಂಬಳ, ಉಳಿದ ಸವಲತ್ತುಗಳು ಮತ್ತು ಈ ವ್ಯವಹಾರಗಳನ್ನು ನೋಡಿಕೊಳ್ಳಲು ಬೇಕಾದ ಇತರೆ ಉದ್ಯೋಗಗಳನ್ನೂ ಸೃಷ್ಟಿಸುತ್ತದೆ. ಹೀಗೆ ಎಲ್ಲದರ ಮೇಲೂ ಖರ್ಚು ಮಾಡಿಯೂ ಒಳ್ಳೆಯ ಲಾಭವನ್ನು ನಿರೀಕ್ಷಿಸುತ್ತದೆ. ಹಾಗಾಗಿ ಯಾವ ಕಂಪನಿಯಲ್ಲಿ ಹೆಚ್ಚು ಉದ್ಯೋಗಿಗಳು ಇರುತ್ತಾರೋ ಆ ಕಂಪನಿಯ ಆದಾಯವೂ ಹೆಚ್ಚುತ್ತದೆ. ಭಾರತದ ಬಹುದೊಡ್ಡ ಕಂಪನಿಗಳು ಕೆಲವೇ ವರ್ಷಗಳಲ್ಲಿ ಹೆಮ್ಮರಗಳಂತೆ ಬೆಳೆದು ನಿಲ್ಲಲು ಕಾರಣವಾಗಿದ್ದು ಈ ಪ್ರಕ್ರಿಯೆಯೇ.

ಈಗ ರೂಪಾಯಿಯ ಮುಖಬೆಲೆಯ ಮುಂದೆ ಡಾಲರ್ ಬೆಲೆ ಇಳಿಮುಖವಾಗುತ್ತಿದ್ದಂತೆ ಈ ಡಾಲರ್ ಗಳಿಕೆಯನ್ನು ರೂಪಾಯಿಗೆ ಬದಲಾಯಿಸುವಾಗ ಆಗುವ ಬೃಹತ್ ಇಳಿಕೆ ಇಲ್ಲಿನ ಐಟಿ ಕಂಪನಿಗಳ ಪಾಲಿಗೆ ಬಿಸಿ ತುಪ್ಪವಾಗಿದೆ. ಡಾಲರ್ ಮುಂದೆ ರೂಪಾಯಿ ಹೀಗೊಮ್ಮೆ ಗಟ್ಟಿಯಾಗಬಹುದು ಎನ್ನುವ ಅನುಮಾನ ಐಟಿ ಕಂಪನಿಗಳಿಗೆ ಇರಲಿಲ್ಲವೆಂತಲ್ಲ. ಎಲ್ಲ ಐಟಿ ಕಂಪನಿಗಳೂ ಇಂಥದೊಂದು ಆಗಬಹುದು ಎನ್ನುವ ಎಚ್ಚರದಲ್ಲೇ ತಮ್ಮ ವ್ಯಾಪಾರಗಳನ್ನು ಬೆಳೆಸುತ್ತಿರುತ್ತಾರೆ. ಆದರೆ ಈಗ ಭಾರತದಲ್ಲಿ ವಿದೇಶಿ ಕೆಲಸಗಳನ್ನು ಗುತ್ತಿಗೆ ತೆಗೆದುಕೊಳ್ಳುವ ವಿಚಾರದಲ್ಲಿ ಎಷ್ಟು ಕಾಂಪಿಟಿಷನ್ ಇದೆ ಎಂದರೆ, ತೀರಾ ಚಿಕ್ಕದು ಎನ್ನಬಹುದಾದ ಕೆಲಸಗಳಿಗೂ ಸಹ ಚಿಕ್ಕ ಚಿಕ್ಕ ಕಂಪನಿಗಳ ಜೊತೆ ಎಚ್‌ಪಿ, ವಿಪ್ರೋ, ಇನ್‌ಫೋಸಿಸ್, ಆರೆಕಲ್ ಥರದ ದೈತ್ಯರು ಬಿಡ್ ಮಾಡುತ್ತಿದ್ದಾರೆ. ಈ ಪೈಪೋಟಿಯಲ್ಲಿ ಯಾರು ಕಡಿಮೆ ಬಿಡ್ ಮಾಡುತ್ತಾರೋ ಅವರಿಗೆ ಕೆಲಸ ದಕ್ಕುವುದರಿಂದ, ಮೊದಲಿದ್ದಷ್ಟು ಬೆಲೆ ಈಗ ಸಿಗದಾಗಿದೆ. ಈ ಸ್ಥಿತಿಯಲ್ಲಿ ಕೆಲವು ಕಂಪನಿಗಳು ವಿದೇಶಿ ಕಂಪನಿಗಳ ಸಹಭಾಗಿತ್ವ ಪಡೆದು ತಮ್ಮ ಕಂಪನಿಗೆ ನಿರಂತರವಾಗಿ ಕೆಲಸ ಇರುವಂತೆ ನೋಡಿಕೊಳ್ಳುತ್ತಾರೆ. ಇದರಲ್ಲಿ ಲಾಭ ಕಡಿಮೆ. ಆದರೆ ಕೆಲಸ ಇದ್ದೇ ಇರುವ, ಕಡಿಮೆಯಾದರೂ ನಿರಂತರವಾಗಿ ಲಾಭ ಬರುವ ಆಶಾ ಭಾವನೆ ಇರುತ್ತದೆ. ಏನೇ ಆದರೂ ಇಲ್ಲಿಯವರೆಗೆ ಆರಾಮವಾಗಿದ್ದ ಐಟಿ ಕಂಪನಿಗಳು ಈ ಪ್ರಕ್ರಿಯೆಯಿಂದಾಗಿ ಸ್ವಲ್ಪ ವಿಚಲಿತವಾಗಿರುವುದಂತೂ ಸುಳ್ಳಲ್ಲ.

ಇಂಥದೊಂದು ಬೆಳವಣಿಗೆಯನ್ನು ಅಂಕಿ ಅಂಶಗಳ ಮೂಲಕ ನೋಡೋಣ:

ಒಬ್ಬ ಉದ್ಯೋಗಿಗೆ ಒಂದು ಗಂಟೆಗೆ ೩೦ ಡಾಲರ್‌ಗಳನ್ನು ಕಂಪನಿಯೊಂದು ಪಡೆಯುತ್ತದೆ ಎಂದಿಟ್ಟುಕೊಳ್ಳೋಣ. ಅಂದರೆ ದಿನಕ್ಕೆ ೮ ಗಂಟೆಯಂತೆ, ವಾರಕ್ಕೆ ೪೦ ಗಂಟೆಗಳಾಗುತ್ತವೆ. ತಿಂಗಳಿಗೆ ೧೬೦ ಗಂಟೆಗಳಾಗುತ್ತವೆ. ಅಂದರೆ ಒಂದು ತಿಂಗಳಿಗೆ ಒಬ್ಬ ಉದ್ಯೋಗಿಯಿಂದ ಕಂಪನಿಯು ೪೮೦೦ ಡಾಲರ್ ಗಳಿಸುತ್ತದೆ. ಡಾಲರ್‌ಗೆ ೪೦ ರೂಪಾಯಿಯಂತೆ ಅದರ ಮೊತ್ತ ೧,೯೨,೦೦೦ ಆಗುತ್ತದೆ. ಅದೇ ಕೆಲಸಕ್ಕೆ ಡಾಲರ್‌ಗೆ ೪೫ ರೂಪಾಯಿ ಇದ್ದಾಗ ೨,೧೬,೦೦೦ ಆಗುತಿತ್ತು. ಅಂದರೆ ಒಬ್ಬ ಉದ್ಯೋಗಿಯ ಲೆಕ್ಕದಲ್ಲಿ ೨೪,೦೦೦ ರೂ. ನಷ್ಟ ತಿಂಗಳಿಗೆ ಸಂಭವಿಸುತ್ತದೆ. ಇನ್‌ಫೋಸಿಸ್‌ನಲ್ಲಿ ಸುಮಾರು ೭೫,೦೦೦ ಜನ ಉದ್ಯೋಗಿಗಳಿದ್ದಾರೆ. ಅಲ್ಲಿಗೆ ತಿಂಗಳಿಗೆ ಇನ್‌ಫೋಸಿಸ್‌ಗೆ ಆಗುವ ನಷ್ಟ ೧೮೦,೦೦,೦೦,೦೦೦ ರೂ.ಗಳು. ಅಂದರೆ ೧೮೦ ಕೋಟಿಗಳು. ವರ್ಷಕ್ಕೆ ೨,೧೬೦ ಕೋಟಿಗಳು.

ಇದೊಂದು ಊಹೆಯ ಲೆಕ್ಕಾಚಾರ ಮಾತ್ರ. ಎಲ್ಲ ಕೆಲಸಗಳಿಗೂ ಎಲ್ಲ ಕಂಪನಿಗಳಿಗೂ ೩೦ ಡಾಲರ್ ಸಿಗಲಾರವು. ೧೫-೪೦ರ ನಡುವೆ ಬೇರೆ ಬೇರೆ ಬೆಲೆಗಳಲ್ಲಿ ಕಂಪನಿಗಳು ಕೆಲಸ ನಿರ್ವಹಿಸುತ್ತವೆ. ಆದರೆ ಹೀಗೊಂದು ಊಹೆಯ ಲೆಕ್ಕದಿಂದ ನಷ್ಟದ ಅಂದಾಜು ಸಿಗಬಹುದು ಎನ್ನುವುದು ಮಾತ್ರ ನನ್ನ ಈ ಉದಾಹರಣೆಯ ಉದ್ದೇಶ.

ಹೀಗೆ ರೂಪಾಯಿಯ ಗಟ್ಟಿತನ ಐಟಿ ಕಂಪನಿಗಳಿಗೆ ತಂದ ಆತಂಕವನ್ನು ಇನ್ನು ಮುಂದೆ ಈ ಕಂಪನಿಗಳು ಹೇಗೆ ನಿಭಾಯಿಸುತ್ತವೆ ಎನ್ನುವುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಬಹುತೇಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯರು ಸಹ ಇಂಥದೊಂದು ಬೆಳವಣಿಗೆಯಿಂದಾಗಿ ಕಂಪನಿಗಳು ಕೈಕೊಳ್ಳಬಹುದಾದ ತೀರ್ಮಾನಗಳ ಕಡೆ ಮುಖ ಮಾಡಿದ್ದಾರೆ. ಮೀಡಿಯಾಗಳು ಐಟಿ ಕಂಪನಿಗಳ ಉದ್ಯೋಗಿಗಳು ಇನ್ನು ಮುಂದೆ ಶನಿವಾರವೂ ಕೆಲಸ ಮಾಡಬೇಕಾಗಬಹುದು ಎನ್ನುವ ಅಂದಾಜನ್ನು ಮಾಡುತ್ತಿವೆ. ಆದರೆ ಈ ಕ್ಷಣದವರೆಗೆ ಇದು ಒಂದು ರೂಮರ್ ಮಾತ್ರವೇ. ಇನ್‌ಫೋಸಿಸ್‌ನ ನಾರಾಯಣಮೂರ್ತಿ ತಮ್ಮ ಕಂಪನಿ ಸೇರಿದಂತೆ ಉಳಿದವರಿಗೆ ಛಿosಣ ಛಿuಣಣiಟಿg (ಅಂದರೆ ಕಂಪನಿ ಉದ್ಯೋಗಿಗಳಿಗೆ ಒದಗಿಸುತ್ತಿರುವ ಸವಲತ್ತುಗಳ ಕಡಿತ) ಮಾಡಿ ಎಂದು ಉಪದೇಶಿಸುತ್ತಿದ್ದಾರೆ. ಸಂಬಳದಲ್ಲಿ ಕಡಿತ ಮಾಡುವುದು ಸದಕ್ಕೆ ದೂರದ ಮಾತು. ಯಾಕೆಂದರೆ ಹಾಗಾದ ತಕ್ಷಣ ಇಲ್ಲಿನ ಉದ್ಯೋಗಿಗಳು ವಿದೇಶಿ ಮೂಲದ ಕಂಪನಿಗಳತ್ತ ಮುಖ ಮಾಡಬಹುದು ಎನ್ನುವ ಸೂಕ್ಷ್ಮ ಅರಿವು ಐಟಿ ಕಂಪನಿಗಳಿಗೆ ಇದೆ ಎನ್ನುವುದು ಬಲ್ಲವರ ಮಾತು. ಹಾಗಾಗಿ ಉದ್ಯೋಗಿಗಳ ಸವಲತ್ತುಗಳಿಗೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆಗಳು ಮಾತ್ರ ಸದಕ್ಕೆ ಕಾಣಿಸುತ್ತಿವೆ. ಇದೆಲ್ಲದರ ನಡುವೆ ಬರಲಿರುವ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳ ಕುರಿತು ಕುತೂಹಲಗಳು ಮುಂದುವರಿದೇ ಇವೆ. ಯಾವ ಥರದ ಬದಲಾವಣೆಗಳು ಐಟಿ ಉದ್ಯಮಕ್ಕೆ ಬರಲಿವೆಯೋ ಎನ್ನುವ ಚಿಂತೆ ಐಟಿ ಉದ್ಯೋಗಿಗಳಿಗೆ ಇದ್ದೇ ಇದೆ.

ಹಲವಾರು ಭಾರತೀಯ ಮೂಲದ ಕಂಪನಿಗಳು ಹೊಸ ಬ್ಯುಸಿನೆಸ್ ಮಾಡೆಲ್‌ಗಳ ಹುಡುಕಾಟ ನಡೆಸಿವೆ ಎನ್ನುವ ಮಾತೂ ಸಹ ಆಗಾಗ ಕೇಳಿಸುತ್ತಿವೆ. ಅದು ಈಗಿನ ಸ್ಥಿತಿಯ ಅನಿವಾರ್ಯತೆ ಕೂಡಾ ಹೌದು. ಹಾಗೇನಾದರೂ ಇಲ್ಲಿನ ಸಿ‌ಇ‌ಓಗಳು ಹೊಸ ಮಾಡೆಲ್‌ಗಳನ್ನು ತಂದದ್ದೇ ಆದರೆ, ಅದರಿಂದ ಭಾರತದ ರೂಪಾಯಿ ಮೌಲ್ಯವರ್ಧನೆ ಹಾಗೂ ವಹಿವಾಟು ಎರಡನ್ನೂ ಸಮತೋಲನದಿಂದ ಬೆಳೆಸಲು ಸಾಧ್ಯವೇ? ಕಾಲವೇ ಎಲ್ಲಕ್ಕೂ ಉತ್ತರ ಹೇಳಬೇಕಿದೆ. ಕಾದು ನೋಡುವುದಷ್ಟೇ ನಮ್ಮ ಕೆಲಸ.

- ಕಿರಣ್ ಕುಮಾರ್ ಕೆ,