ನಮ್ಮ ತಲೆಮಾರಿನ ಯುವಕರಲ್ಲಿ ಸಾಮಾಜಿಕ ಬದ್ದತೆಯನ್ನು ಕಾರ್ಯಗತ ಮಾಡಲು ಹೆಣಗುತ್ತಿರುವ ಕೆಲವೇ ಕೆಲವರಲ್ಲಿ ಪ್ರಶಾಂತ್ ಕೂಡ ಒಬ್ಬರು. ನಾನು ಪ್ರಶಾಂತ್ರನ್ನು ಮೊದಲ ಬಾರಿಗೆ ನೋಡಿದ್ದು 1998 ರಲ್ಲಿ ಕುವೆಂಪು ಯುನಿವರ್ಸಿಟಿಯ ಆವರಣದಲ್ಲಿ. ಅಲ್ಲಿಗೆ ತಮ್ಮ ಎಂಫಿಲ್ ಪದವಿಗಾಗಿ ಅಲೆಯುತ್ತಿದ್ದ ಪ್ರಶಾಂತ್ ಪರಿಚಯವಾದಾಗ ಕರ್ನಾಟಕದ ಜನಸಮುದಾಯಗಳ ಬಗ್ಗೆ ಸಮಗ್ರವಾದ ಚಿತ್ರಣವನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು. ಕರ್ನಾಟಕದಲ್ಲಿರುವ ಎಲ್ಲ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ರೀತಿ ನೀತಿಗಳ ಬಗ್ಗೆ ಅವರು ನಡೆಸುತ್ತಿದ್ದ ಸಂಶೋದನೆ ಹಾಗು ಕಲೆ ಹಾಕುತ್ತಿದ್ದ ವಿವರಗಳನ್ನು ನೋಡಿ ನನಗೆ ಆ ಅಧ್ಯಯನದಲ್ಲಿ ಅವರ ಜೊತೆಗೆ ಒಂದಿಷ್ಟು ಕೆಲಸ ಮಾಡಬೇಕೆನ್ನಿಸಿ ಕೈ ಜೋಡಿಸಿದ್ದೆ. ಅಲ್ಲಿಂದ ಶುರುವಾದ ಸ್ನೇಹ ಇಂದಿನವರೆಗೂ ಬೆಳೆದು ಬಂದಿದೆ.
ಗುಂಪಿನಲ್ಲಿ ಯಾರಾದರೂ ಇಂಗ್ಲಿಷ್ನಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದರೆ, ನನಗೆ ಅವರ ಹಾಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲವೇ ಎಂದು ಒಳಗೊಳಗೇ ಕೊರಗುವ ಪ್ರಶಾಂತ್, ಕನ್ನಡದಲ್ಲಿ ವಾಚಾಳಿ ಎನ್ನುವಷ್ಟರ ಮಟ್ಟಿಗೆ ಮಾತನಾಡತೊಡಗುತ್ತಾರೆ. ಮೊದಲ ಭೇಟಿಯಲ್ಲಿ ಒಂಚೂರು ಕಿಲಾಡಿಯೆನ್ನಿಸುವ ಪ್ರಶಾಂತ್ರ ಸೀರಿಯಸ್ ಮುಖ ಕಾಣಲು ಒಂದಿಷ್ಟು ಸಮಯ ಬೇಕಾಗುತ್ತದೆ. ಕರ್ನಾಟಕದ ಜಾತಿ ಪದ್ದತಿ, ಲಂಬಾಣಿ ಜನಾಂಗ, ನಮ್ಮಲ್ಲಿನ ವೃದ್ಧರ ಪರಿಕಲ್ಪನೆಗಳ ಬಗ್ಗೆ ಮೊದಮೊದಲು ಕೆಲಸ ಮಾಡತೊಡಗಿದ ಪ್ರಶಾಂತ್, ಹಂಪಿ ಕನ್ನಡ ವಿಶ್ವವಿದ್ಯಾಯಲವನ್ನು ಸೇರಿದ ಬಳಿಕ ಹೆಚ್ಚು ಕೆಲಸ ಮಾಡಿದ್ದು ಕರ್ನಾಟಕದ ಶಾಲಾ ಶಿಕ್ಷಣದ ಬಗ್ಗೆ.
ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರು ಹೆಚ್ಚಾಗಿ ಮಾತನಾಡಿದ್ದು ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಎಸ್ಡಿಎಂಸಿ (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ಕಾರ್ಯಕ್ರಮದ ಬಗ್ಗೆ. ಶಿಕ್ಷಣದ ವಿಕೇಂದ್ರೀಕರಣ ಈ ಕಾರ್ಯಕ್ರಮದ ಮುಖ್ಯ ಆಶಯ. ಆದರೆ ಮೊದಲಿದ್ದ ವ್ಯವಸ್ಥೆಗೆ ಹೊಂದಿಕೊಂಡಿದ್ದ ಶಿಕ್ಷಕರು ಹಾಗೂ ಬಿಇಓಗಳು ಇದೊಂದು ಮತಿ ಇಲ್ಲದ ವ್ಯವಸ್ಥೆ ಎಂದು ಹೀಗಳೆಯುತ್ತಿದ್ದಾಗ ಮತ್ತು ಇಂಥದೊಂದು ವ್ಯವಸ್ಥೆ ಬೇಡ ಎನ್ನುತ್ತಿರುವಾಗ ಅದರ ಬಗ್ಗೆ ಅಧ್ಯಯನ ನಡೆಸಲು ಹುಟ್ಟಿಕೊಂಡಿದ್ದು ಈ ಎಸ್ಡಿಎಂಸಿ. ಅಷ್ಟು ಹೊತ್ತಿಗಾಗಲೇ ಹೈದರಾಬಾದ್ ಕರ್ನಾಟಕದಲ್ಲಿನ ಶಾಲೆಗಳಲ್ಲಿ ಬಿಸಿಯೂಟ ಹಾಗೂ ದಲಿತರ ಶಿಕ್ಷಣದ ಬಗ್ಗೆ ಒಂದಿಷ್ಟು ತಲೆಕೆಡಿಸಿಕೊಂಡು ಕೂತಿದ್ದ ಪ್ರಶಾಂತ್ರಿಗೆ ಒಂದು ವೇದಿಕೆ ಸಿಕ್ಕಿದಂತಾಯಿತು. ಅಲ್ಲಿಯವರೆಗೂ ಮಾಡಿದ ಕೆಲಸವೆಲ್ಲ ‘ಅಧ್ಯಯನ’ ಅಂತ ಮಾತ್ರವೇ ಅನಿಸುತ್ತಿದ್ದುದು ಈಗ ಅಧ್ಯಯನದ ಜೊತೆಗೆ ನೇರವಾಗಿ ಕ್ಷೇತ್ರದಲ್ಲಿ ಕೆಲಸ ವಿಸ್ತರಣೆ ಮಾಡಲು ಅವಕಾಶ ಸಿಕ್ಕಿದ್ದು ಪ್ರಶಾಂತ್ಗೆ ಸಿಕ್ಕ ವರವೇ ಸರಿ. ಶಾಲಾಶಿಕ್ಷಣದಲ್ಲಿ ತೀರಾ ಹಿಂದುಳಿದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಎಸ್ಡಿಎಂಸಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು, ಶಾಲೆಗಳ ಅಭಿವೃದ್ಧಿಗಾಗಿ ನೇಮಿಸಿರುವ ‘ಶಾಲಾಭಿವೃದ್ಧಿ ಸಮಿತಿ’ಯಲ್ಲಿನ ಸದಸ್ಯರು ಹಾಗೂ ಶಿಕ್ಷಕರ ನಡುವೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಕೈಹಾಕಿದರು. ವಿಶೇಷವೆಂದರೆ ರಾಯಚೂರು ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ‘ಶಾಲಾಭಿವೃದ್ಧಿ ಸಮಿತಿಗಳ ಸಮಾವೇಶ’ವನ್ನು ಯಾರ ಅನುದಾನವೂ ಇಲ್ಲದಂತೆ ನಡೆಸಿದ್ದು. ಈ ಸಮಾವೇಶಗಳಿಗೆ ಎಲ್ಲಾ ಹಳ್ಳಿಗಳಿಂದ ಜನರು ತಮ್ಮ ಖಚರ್ಿನಲ್ಲೇ ಬಂದು ತಮ್ಮ ತಮ್ಮ ಊರಿನ ಶಾಲೆಗಳ ಗುಣಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವುದನ್ನು ಕುರಿತು ಚರ್ಚಿಸಿ ತಾವೂ ಸಹ ಶಿಕ್ಷಣ ವ್ಯವಸ್ಥೆಯ ಭಾಗ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡಿದ್ದು ಪ್ರಶಾಂತ್ ಮತ್ತು ಅವರ ಜೊತೆ ಕೆಲಸ ಮಾಡಿದ ಆ ಜಿಲ್ಲೆಯ ಕೆಲವು ಶಿಕ್ಷಕರಿಂದ ಎನ್ನುವುದು ಗಮನಿಸಬೇಕಾದದ್ದು. ಈಗ ಕೊಪ್ಪಳ ಜಿಲ್ಲೆಯಲ್ಲೂ ಇಂಥ ಸಮಾವೇಶ ಮಾಡಲು ಹೊರಟಿದ್ದಾರೆ.
ಶಿಕ್ಷಣ ವ್ಯವಸ್ಥೆಯನ್ನು ಆಡಳಿತ ವರ್ಗದವರ ಹಿಡಿತದಿಂದ ತಪ್ಪಿಸಿ ಅದನ್ನು ವಿಕೇಂದ್ರೀಕರಣಗೊಳಿಸಿದರೆ ಈಗಿರುವುದಕ್ಕಿಂತ ಹೆಚ್ಚಿನ ಗುಣಮಟ್ಟ ಆ ಶಾಲೆಗಳಿಗೆ ಬರಲು ಸಾಧ್ಯ ಎನ್ನುವುದು ಪ್ರಶಾಂತ್ಗಿರುವ ನಂಬಿಕೆ. ಪೋಷಕರಿಗೆ ಶಾಲೆಗಳ ಒಡೆತನ ಮನೋಭಾವ ಬಂದರೆ, ಅದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಅವರೇ ಪ್ರಯತ್ನಿಸುತ್ತಾರೆ. ಹಾಗೆ ಒಡೆತನದ ಮನೋಭಾವವನ್ನು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರಲ್ಲಿ ಮೂಡಿಸಲು ಹೊರಟಿರುವುದು ಪ್ರಶಾಂತ್ರ ಲೇಟೆಸ್ಟ್ ಸಾಹಸ ಯಾತ್ರೆ. ಜೊತೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ಆ ಭಾಗದ ಮಕ್ಕಳು ಪಡೆಯಬೇಕು ಎಂದು ಇನ್ನಿಲ್ಲದಂತೆ ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿರುವ ಪ್ರಶಾಂತ್ಗೆ ಶಿಕ್ಷಣ ಎನ್ನುವುದು ಅಲ್ಲಿನ ಜನರ ಆಥರ್ಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳಿಂದ ಹೇಗೆ ಪ್ರಭಾವಿತವಾಗಿರುತ್ತದೆ ಎನ್ನುವುದರ ಅರಿವು ಇರುವುದರಿಂದ ಅವರಿಂದ ಹೆಚ್ಚಿನದನ್ನು ನಾವು ನಿರೀಕ್ಷಿಸಬಹುದು.
ನಾನು ಬಲ್ಲಂತೆ ಪ್ರಶಾಂತ್ Serious Research ವಿದ್ಯಾರ್ಥಿಯಲ್ಲ. ಅಧ್ಯಯನ ತಳಮಟ್ಟದಲ್ಲಿ ಕಾರ್ಯಗತವಾಗುವುದು ಸಾಧ್ಯವಾಗದಾಗ ಖಿನ್ನರಾಗಿ ಕುಳಿತುಬಿಟ್ಟಿದ್ದೂ ಇದೆ. ಪ್ರಶಾಂತ್ಗೆ ಅಧ್ಯಯನ ಅಭಿವೃದ್ಧಿಗೆ ಸಹಾಯವಾಗುವಂತೆ ಸಮಾಜದಲ್ಲಿ ಅಳವಡಿಕೆಯಾಗಬೇಕೆನ್ನುವ ಆಸೆ ಜಾಸ್ತಿ. ಅಧ್ಯಯನಕ್ಕಿಂತ ಅದರ ಕಡೆಗೆ ಹೆಚ್ಚಿನ ಒಲವು ಇರುವಂತೆ ನನ್ನಂತೆ ಹಲವರಿಗೆ ಕಾಣಿಸುವುದು ಅದರಿಂದಲೇ ಇರಬೇಕು. ಅವರಿಗಿರುವ ಸಾಮಾಜಿಕ ಕಾಳಜಿ ಮತ್ತು ಅದಕ್ಕೆ ಹೊಂದಿಕೊಳ್ಳುವಂಥ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಕೆಲವೊಮ್ಮೆ ಹೊಟ್ಟೆಕಿಚ್ಚು ತರಿಸಿದ್ದೂ ಇದೆ. ಈಗೀಗ ಅಮತ್ರ್ಯ ಸೇನ್ರ ‘ಗಜ ಠಜಿ ಗಿಠಛಿಜ’ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾತನಾಡುತ್ತಿರುವ ಪ್ರಶಾಂತ್, ಹೈದರಾಬಾದ್ ಕರ್ನಾಟಕದ ಜನರಲ್ಲಿ ಅಂಥದೊಂದು ಧ್ವನಿಯನ್ನು ಅವರೇ ಎತ್ತುವಂತೆ ಮಾಡಬೇಕೆನ್ನುವ ಹಂಬಲವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ಅಂಥ ಧ್ವನಿಯುಳ್ಳ ಕರ್ನಾಟಕದ ಜಿಲ್ಲೆಗಳಲ್ಲಿ ಒಬ್ಬನೇ ರಾಜಕಾರಣಿ ಮತ್ತೆ ಮತ್ತೆ ಆರಿಸಿ ಬಂದಿಲ್ಲ. ಜೊತೆಗೆ ಆರಿಸಿ ಬಂದವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲೇ ಬೇಕಾಗಿಬರುತ್ತದೆ. ಆದರೆ ಉತ್ತರ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಒಬ್ಬನೇ ರಾಜಕಾರಣಿ ಮೂರು ದಶಕಗಳಿಂದಲೂ ಆಯ್ಕೆಯಾಗುತ್ತಿದ್ದರೂ ಅಭಿವೃದ್ಧಿಕಾಣದೇ ಕುಳಿತಿವೆ ಆ ಜಿಲ್ಲೆಗಳು. ಈಗಿರುವ ಅವಕಾಶವನ್ನು ಇನ್ನಷ್ಟು ವಿಸ್ತರಿಸಿ ಇಂಥ ಅರಿವು ಮೂಡಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ.
ಪ್ರಶಾಂತ್ ನೇರವಾಗಿ ಯಾವುದೇ ಗುಂಪುಗಳಲ್ಲಿ ಗುರುತಿಸಿಕೊಂಡಿಲ್ಲ. Leftist ಗುಣಗಳು ಮೈತುಂಬಾ ಇದ್ದರೂ Leftist ಎಂದು ಬ್ರಾಂಡ್ ಆಗಲಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವುದು ಪ್ರಶಾಂತ್ಗೆ ಹುಟ್ಟಿನಿಂದಲೂ ಬಂದ ಗುಣ (ಹಾಸನ ಜಿಲ್ಲೆಯವರಲ್ಲವೇ?). ಒಂದು ಕಡೆ ನಿಲ್ಲದೇ ಸುತ್ತುತ್ತಲೇ ಇರುವುದು ಅವರೇ ಆಯ್ದುಕೊಂಡ ಶಾಪ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಂಡರೆ ಹೌಹಾರುತ್ತಲೇ ಆ ಭಯವನ್ನು ತಮ್ಮ ಕೆಲಸಗಳಿಗೆ ಒಂದು ಸೂಕ್ಷ್ಮತೆ ಕಂಡುಕೊಳ್ಳಲು ಬಳಸಿಕೊಂಡಿರುವುದು ಅವರ ಧೈರ್ಯ. ಬೇರೆಯವರ ಬಗ್ಗೆ ಗೌರವವಿಟ್ಟುಕೊಂಡೇ ಅವರ ಬಗ್ಗೆ ಕಿಲಾಡಿಮಾತುಗಳನ್ನಾಡುವುದು ಅವರ ಹಾಸ್ಯಮಿಶ್ರಿತ ವೈಯಕ್ತಿಕ ವಿಮರ್ಶೆಯ ಧಾಟಿ. ತೀರಾ ಖಿನ್ನರಾದರೆ ಶೃಂಗೇರಿಯ ಶಾರದಾಂಬೆ ದೇವಸ್ಥಾನದವರೆಗೂ ಹೋಗಿ ಗಂಟೆಗಟ್ಟಲೇ ಕೂತು ಬರುವುದು ಹೆಚ್ಚಿನವರಿಗೆ ಗೊತ್ತಿರದ ವಿಷಯ.
ಪ್ರಶಾಂತ್ ಮಾಡುತ್ತಿರುವ ಕೆಲಸಗಳಲ್ಲಿ ಅವರಿಗೆ ಯಶ ಸಿಗಲಿ ಎನ್ನುವುದು ಕನ್ನಡ ಟೈಮ್ಸ್ನ ಹಾರೈಕೆ.
ಬಾಕ್ಸ್:
ಹುಟ್ಟಿದ್ದು: 1970, ಡಿಸೆಂಬರ್ 4, ಹಿರಿಸಾವೆ, ಚೆನ್ನರಾಯಪಟ್ಟಣ, ಹಾಸನ ಜಿಲ್ಲೆ.
ಓದಿದ್ದು: ಹಿರಿಸಾವೆ, ಚೆನ್ನರಾಯಪಟ್ಟಣ, ಮೈಸೂರು ವಿಶ್ವವಿದ್ಯಾಲಯ (ಸಮಾಜಶಾಸ್ತ್ರ). ಎಂಫಿಲ್ ಪದವಿ ಕುವೆಂಪು ವಿಶ್ವವಿದ್ಯಾಲಯ. ಪಿ.ಎಚ್.ಡಿ ಹಂಪಿ ಕನ್ನಡ ವಿಶ್ವವಿದ್ಯಾಲಯ.
ವೃತ್ತಿ: ಅಧ್ಯಾಪಕ, ಹಂಪಿ ಕನ್ನಡ ವಿಶ್ವವಿದ್ಯಾಲಯ.
ಪ್ರಕಟಣೆಗಳು:
1. ಕರ್ನಾಟಕದ ಜನಸಮುದಾಯ ಕೋಶ (2000)
2. ವೃದ್ಧರ ಪರಿಕಲ್ಪನೆ (2004)
3. ಬಿಸಿಯೂಟ – ಅಧ್ಯಯನ ವರದಿ (2005)
4. ಈಶಾನ್ಯ ಕರ್ನಾಟಕ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ (2005)
5. ಶಾಲಾ ಶಿಕ್ಷಣದ ವಿಕೇಂದ್ರೀಕರಣ: ಎಸ್.ಡಿ.ಎಂ.ಸಿ ಕಾರ್ಯಕ್ಷಮತೆ (2006)
6. ದಲಿತರ ಶಿಕ್ಷಣ (ಪ್ರಕಟಣೆಯ ಹಾದಿಯಲ್ಲಿ)
ಇತರೆ: ಅಭಿವೃದ್ಧಿ ಎನ್ನುವ ರೆಫರೆನ್ಸ್ ಪತ್ರಿಕೆಯ ಸಂಪಾದಕ.
Hi Kiran,
Long time since you posted!!
Somehow, the font on this post is visible but looks garbled on my screen. Please recheck.
-Tina